Monday, November 27, 2017

ಅರ್ಧ ಕನಸು


ಬೆಳ್ಗೆ ಇನ್ನು ೬ ಗಂಟೆ, ಕನ್ಸಲ್ ಇವತ್  ಶನಿವಾರ್ ಸಂತೆ,
ಒಂದು ಕಡೆಗೆ ಪೀಪಿ ಸೌಂಡು, ಎಲ್ಲಿ ನೋಡ್ದ್ರೂ ಹೆಂಗ್ಸ್ರ್ ದಂಡು.
ಉದ್ದ ಉದ್ದ ಬದ್ನೇಕಾಯಿ ನೋಡ್ತಾ ಇತ್ತು ನನ್ನೇ ನಾಯಿ.
ಸಿಕ್ಕಿದ್ದೆಲ್ಲಾ ಎತ್ತಿಕೊಂಡೆ  ಕೆಂಪಿ ಬಸ್ಸನ್ ಹತ್ತಿಕೊಂಡೆ

ಬಹಳ ಜನರ ಜಂಗುಳಿಯಲಿ ಜನಮನದ ಆರ್ತನಾದ ಕೇಳಿದರೂ ಲೆಕ್ಕಿಸದೆ ಕಡೆಗಣಿಸಿ,  ಕಟ್ಟಕಡೆಗೆ ನಿಂತ ನನ್ನ ನೋಟದಲ್ಲೇ ದಿಟ್ಟಿಸುತ್ತಾ ಎದುರು  ಬಂದು ಹೇಳ್ತಾ ಇದ್ದ  ಟಿಕೆಟ್ ಟಿಕೆಟ್ ಟಿಕೆಟ್ಟು ತಗೋಳಿ ಟಿಕೆಟ್ ಟಿಕೆಟ್ಟು.

ನೋಡ್ತಾ ನೋಡ್ತಾ ಬಂದೇಬಿಡ್ತು ನಮ್ಮ ಮನೆಯ ಹತ್ರದ್ ಸ್ಟಾಪ್ಪು
ಇಳ್ಯೋಕಂತ ಹೆಜ್ಜೆ ಇಟ್ರೆ ಕೊಡ್ತಾ ಇಲ್ಲ ಚೂರು ಗ್ಯಾಪು !!

ಮನೆಗ್ ೨ ಕಿಲೋಮೀಟರ್  ಸಿಕ್ಲೆ ಇಲ್ಲ ಯಾರದೂ ಮೋಟರ್
ಎರಡು ಕಡೆಗೆ ಕಯ್ಯ ಚೀಲ ಬಾಯಲ್ಲೊಂದು ಇತ್ತು ಕವಳ
announcement : ತಂಬಾಕು ರಹಿತ ಕವಳ ಆರೋಗ್ಯಕ್ಕೆ ಹಾನಿಕರವಲ್ಲ!!

 ಮನೆಗೆ ಬಂದ್ರೆ ಅಂಗಳ ಕ್ಲೀನು ಸುಬ್ಬಿ ಸಗಣಿಲ್ ಚೇಂಜ್ಡ್ ದ  ಸೀನು.
ತೋಟದಿಂದ ದೊಡ್ಡಪ್ಪ ಕೂಗ್ತಿದ್ದದ್ದು ಕೇಳ್ತಪ್ಪ. .
ಕೊಟ್ಗೆಲ್  ಯಾರರೋ  ಹೋಯ್ ,ಕೊಟ್ಗೆಲ್  ಯಾರರೋ  ಹೋಯ್  ಹೋಯ್  .
ದನ ಬಂದು ಕಟ್ಕಳಿ, ಹಾಲು ಗೀಲು  ಕರ್ಕಳಿ.

ಆನ್ ಆಗೋದೇ ಮರೆತು ಬಿಟ್ಟ ಮಿಕ್ಸರ್ ಹಿಡ್ಕೊಂಡ್ ಹೊರಟೆ ಬಿಟ್ಟ
ಸ್ಪ್ಲೆಂಡರ್ ಗಾಡಿಯಲ್ಲಿ ಬಾವ, ಅವನ ಹೆಸರೇ ವಾಸುದೇವ!!

೬ನೇ ಕ್ಲಾಸ್ಸಿನ್ ಸೀತೆ ಓದ್ತಾ ಇದ್ಲು ಗೀತೆ
"ಜನಕೆ ಸಂತಸವೀವ . .ಘನನು ನಾನೆಂದೆಂಬ
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ !! "

ಹೋಮಕ್ಕೆಲ್ಲ ಸಿಧ್ಧ ಮಾಡಿ ಕನ್ನಡಿಯಲಿ ಗಡ್ಡ ನೋಡಿ
ಅಣ್ಣ ಬಾಳೆ ಕೊಯ್ದು ತಂದ, ಆಗ್ಲೇ ಬಂತು ಭಟ್ರ ತಂಡ

ಬೇಗ ಸ್ನಾನ ಮಾಡಿ ಬಂದೆ ಲೇಟ್ ಆಗೋಯ್ತು ಅಂದ್ರು ತಂದೆ 
ಕೇಸರಿ ಮಡಿಗೆ  ಹಳದಿ ಶಾಲು, ಭಟ್ರ ಬಾಯಲ್ ಮಂತ್ರ ಚಾಲು. 

ಹೋಮದ್ ಮುಂದೆ ಕುಂತು ಕುಂತು ಸಿಕ್ಕಾಪಟ್ಟೆ ಬೆವರು ಬಂತು 
ಭಟ್ರ ಬಾಯಲ್  ಪಟಕ್ ಹೇಳಿ ಒಂದು ಪಂಚಿಂಗ್ ಲೈನು ಬಂತು. 

"ಪ್ರಥಮ ಬಾರಿ ಪರಶುರಾಮನ ಪರಿಧಿ ದಾಟಿ ಹೋಗುವ  ಪರದೇಶದ ಪಯಣದಲ್ಲಿ ಫಲ ಸಿಗಲಿ ಪರಮಾತ್ಮ" ಎಂದು ಪರಮೇಶ್ವರನಲ್ಲಿ ಪ್ರಾರ್ಥನೆ ಮಾಡ್ಕೋ

ಎಕರೆಗಟ್ಲೆ ತೋಟದಲ್ಲಿ ಬಿದ್ದ ಅಡಿಕೆ  ಹೆಕ್ಕೋರೆಲ್ಲಿ,
ಎಬ್ಸೆ ಬಿಟ್ಳು ಬೆಳ್ಬೆಳಿಗ್ಗೆ,  ಹಿಡಿಕುಂಟ್ ಹಿಡ್ಕಂಡ್ ಸುಜಾತತ್ಗೆ.

ಬ್ರಷ್ಷು ಮಾಡ್ತಾ ಉಗುಳುವಾಗ ಬಾಡಿ ಸ್ವಲ್ಪ ಬೆಂಡಿಂಗು
ಬೇರೆ ದೇಶಕ್  ಹೋಗೋ ಕನಸು ಕನ್ಸಿನಲ್ಲೂ  ಪೆಂಡಿಂಗು. 

Tuesday, April 12, 2016

ಅಸಮಾನ

                                                                ತಲೆಯು  ದಿಂಬನ್ನು ಸಂಧಿಸಿದ ಹಾಗೂ ಕೈ ಕಿಟಕಿಯ ಗಾಜನ್ನು ಸರಿಸಿದ ಕ್ಷಣಗಳೆರಡೂ ಬೇರೆಬೇರೆಯಾಗಿದ್ದರೂ ಅದರಿಂದ  ಗಾಳಿಯ ಪ್ರವೇಶ ಮೊದಲಾದ  ಮತ್ತು ಬಸ್ಸಿನ ಒಳಗಿನ ದೀಪ  ಮರೆಯಾದ ಕ್ಷಣಗಳು ಒಂದೇ ಆಗಿದ್ದವು.

 ಗಾಜನ್ನೇ ಸರಿಸಿದವನಿಗೆ ಕರ್ಟನ್ ಸರಿಸುವುದು ಒಂದು ವಿಷಯವೇ ಅಲ್ಲ. ಬಿಳಿ earphone ಅಲ್ಲಿ  ನಮ್ಮ ವಿಜಯ್ಪ್ರಕಾಶ್  ನಮ್ಮದಲ್ಲದ ಭಾಷೆಯಲ್ಲಿ ಹಾಡುತ್ತಿದ್ದ. ಕಬ್ಬಿಣದ ಸರಳೊಂದು ನನ್ನ  ಆಕಾಶವನ್ನು  ದಿಟ್ಟಿಸುವ ನೋಟಕ್ಕೆ ಉಂಟುಮಾಡುತ್ತಿದ್ದ  ಆಭಾಸ, ಕಡಿಮೆ ಸಿಗ್ನಲ್ ನಲ್ಲಿ  FM Rainbow ಕೇಳಿದಂತಿತ್ತು.   ಪಕ್ಕದ ಸೀಟಿನಲ್ಲಿ ನಿರಾತಂಕವಾಗಿ  s/o ಸತ್ಯಮೂರ್ತಿ ಸಿನಿಮಾವನ್ನು ದೊಡ್ಡ ಧ್ವನಿಯೊಂದಿಗೆ ನೋಡುತ್ತಿದ್ದ ಇಬ್ಬರೂ ಎಲ್ಲರ ನಿದ್ರೆಗೂ ಸರಾಗವಾಗಿ ಅಡ್ಡಿಪಡಿಸುತ್ತಿದ್ದಂತಿತ್ತು. ನಕ್ಷತ್ರಗಳ ಸಂತೆಗೆ  ಆಮಂತ್ರಣರಹಿತನಾಗಿ ಹೋಗಲು  ಸಿದ್ಧನಾಗಿದ್ದೆ. ಇನ್ನೆನು  ಏನೇನಿದೆ  ಅಂತ  ನೋಡಬೇಕು, ಅಷ್ಟರಲ್ಲಿ ಒಂದು  ನಕ್ಷತ್ರ  ನನ್ನನ್ನೇ ಸೆರೆಹಿಡಿದಂತಿತ್ತು. ನಾ ಮಲಗಿದ್ದ ಬಸ್ ಎಷ್ಟೇ ವೇಗವಾಗಿ ಹೋಗುತ್ತಿದ್ದರೂ  ಆ ನಕ್ಷತ್ರ ಮಾತ್ರ  ನನ್ನ  ಕಣ್ಣಳತೆಯಲ್ಲೇ ಇದ್ದು ನಾ ಬೇರೇನನ್ನೂ ನೋಡದಂತೆ ನೋಡಿಕೊಳ್ಳುತ್ತಿತ್ತು. ಅದನ್ನು  ಮರೆಮಾಚಲು ಮರಗಳು  ಸಾಲುಗಟ್ಟಿ ಮಾಡಿದ ಪ್ರಯತ್ನಗಳೆಷ್ಟೋ, ಬಸ್ ಚಾಲಕ ಏರಿಸಿದ ವೇಗವೆಷ್ಟೋ!!  ಅದು ಮಾತ್ರ  ಕಣ್ಣಿಗೆ  ಕಾಣಿಸುತ್ತಲೇ  ಇತ್ತು. ಯಾವಾಗ ಬಸ್ ಒಮ್ಮೆಲೇ  ಎಡಕ್ಕೆ ತಿರುಗಿತೋ, ನಕ್ಷತ್ರ  ಕಣ್ಣಳತೆಯಿಂದ ಬಹಳ  ದೂರವಾದಂತೆ  ಅನಿಸಿತು.  ಸಂತೆಗೆ  ಬಂದಮೇಲೆ ಸುಮ್ಮನಿರದೆ  ಬೇರೆ  ನಕ್ಷತ್ರಗಳನ್ನು ನೋಡೋಣವೆಂದರೆ ಅದಕ್ಕೂ ಒಪ್ಪದ ಮನಸು ಅದೇ ನಕ್ಷತ್ರಕ್ಕಾಗಿ  ಕಾಯುತ್ತಿತ್ತು.  ಬೇರೆ ನಕ್ಷತ್ರಗಳಿಗೇನೂ ಕೊರತೆಯಿರಲಿಲ್ಲ, ಅದರಂತೆಯೇ ಎಷ್ಟೊಂದಿದ್ದವು, ಅದಕ್ಕಿಂತ  ಜಾಸ್ತಿ  ಪ್ರಕಾಶಿಸುವವು ಕೂಡ.   ಆದರೂ ಅದೇ ಬೇಕಿತ್ತು. ಅದರಲ್ಲಿ ಅಷ್ಟೊಂದೇನೂ ವಿಶೇಷವಿರಲಿಲ್ಲ.  ಅದರಷ್ಟಕ್ಕೆ ಅದು ಇದ್ದ ರೀತಿ, ಹೇಳದೆ ಕೇಳದೆ ಜೊತೆಗೆ ಬಂದ ರೀತಿ. . ಮನಸ್ಸಿಗೆ  ಮತ್ತೆನು ಕಾರಣಗಳು  ಬೇಕಿರಲಿಲ್ಲ. ಆ ನಕ್ಷತ್ರವೊಂದೇ ಸಾಕಿತ್ತು.  ಅದು ಮತ್ತೆ ಸಿಗುವುದೆಂದು ನಂಬಿಕೆಯಿತ್ತು . ಬಸ್ ಬಲಕ್ಕೆ ತಿರುಗಿತು. ನಕ್ಷತ್ರ ನನ್ನತ್ತ !!

Saturday, February 15, 2014

ಅಂಚೆ ತಲುಪದ ಪತ್ರ

                                                                                ಅಂದು ಕಾಲೇಜಿನಲ್ಲಿ ನಾನು 'ಪ್ರೀತಿ ಪ್ರೇಮ ಪೂರ್ಣವಿರಾಮ' ಅನ್ನೋ ವಿಷಯದ ಬಗ್ಗೆ ಮಾತನಾಡುತ್ತಿರುವಾಗ ಎಲ್ಲಿಂದಲೋ ಬಂದು ಎಕ್ಸ್ ಕ್ಯೂಸ್ ಮಿ ಹೇಳಿ ನೀ ಕುಳಿತುಕೊಳ್ಳದೇ ಹೋಗಿದ್ದರೆ, ಇಂದು ನಿನ್ನ ವಿಷಯದಲ್ಲಿ ನಾ ಇಷ್ಟು ದೂರ ಬರುತ್ತಲೇ ಇರಲಿಲ್ಲವೇನೋ! ಆಗಲೇ ನನಗನಿಸಿದ್ದು ಇಷ್ಟು ದಿನ ನಾನು ಅಂದುಕೊಂಡಿದ್ದು, ವಾದಿಸಿದ್ದು ಎಲ್ಲ ಸುಳ್ಳು ಎಂದು! ಬಸ್ಸಿನಲ್ಲಿ  ಯಾರದೋ ಗೊತ್ತಿಲ್ಲದವನ ಕಾಲಿನಮೇಲೆ ಒಂದು ಕಾಲನ್ನು ಇಟ್ಟು ನಿಂತಿರುವಾಗ ಕಂಡ ನಿನ್ನ ನಗು, ನನ್ನ ಮನಸ್ಸೂ ನಗುವಂತೆ ಮಾಡಿತ್ತು. ಮೊದಲಿನಿಂದಲೂ ಪ್ರೀತಿ ಅಂದರೆ ಒಂದು ಸುಂದರ ಗೊಂದಲ. ದೇವರ ಥರ! ಅದೇ ಸರಿ ಎಂದು ಖಚಿತವಾಗಲು ನೀ ಕಾರಣವಾದೆ ಅಷ್ಟೇ. 

                                                ನೀ ಸಾಹಿತ್ಯಪ್ರೇಮಿ ಸರಿ, ಆದರೆ ಅದೊಂದೇ ಕಾರಣಕ್ಕೆ ಜೀವನ ಪೂರ್ತಿ ಜೊತೆ ಇರ್ತೀನಿ ಬರ್ತೀಯಾ ಅಂತ ಕೇಳೋಕ್ ಬಂದಾಗ ಒಂದೆರಡು ಸಾಲಾದ್ರೂ ಪ್ರೀತಿ ಪರವಾಗಿ ಹೇಳು ನೋಡೋಣ ಅಂತ ಅಂದ್ಯಲ್ಲ, ಏನು ಮಾತಾಡದೆ ನಾನ್ ಸುಮ್ನಿದ್ದಿದ್ರೆ ಬಿಟ್ ಹೊಗೊರ್ ಥರ !!  ನಾನೂ ಕಷ್ಟಪಟ್ಟು ಏನೋ ಅಂದೆ, 
"ನಾನಿರ್ತೀನಿ ನಿನ್ನ ಮೌನಕ್ಕೆ ಮಾತಾಗಿ, ಮಾತಿಗೆ ಮೌನವಾಗಿ. ನಾನಿರ್ತೀನಿ ನಿನ್ನ ಬದುಕಿನ ಕನಸಾಗಿ,ಕನಸಿನ ಬದುಕಾಗಿ. ನಾನಿರ್ತೀನಿ ನಿನ್ನ ನೆನಪುಗಳಿಗೆ ನೆಪವಾಗಿ, ನೆಪವೇ ಬೇಕಿರದ ನೆನಪಾಗಿ"
ಇದನ್ ಕೇಳಿ ನಿನ್ ಮುಖದಲ್ಲಿ ಮತ್ತೆ ಅದೇ ನಗು, ಆಗಲೇ ಅನಿಸಿದ್ದು ನಂಗೆ ಬದುಕು ಈಗ ಸುಲಭ ಅಂತ.
                                                                 
                                                                  ನೀನು ಚಾಟ್ ಮಾಡದೆ ಅಪ್ಪಿ ತಪ್ಪಿಯೂ ಕರೆ ಮಾಡದೆ ವಿಸ್ಮಯ ಹುಟ್ಟಿಸಿದ್ದೆ. ಅದಕ್ಕೆ ಇರಬೇಕು ವಾರಕ್ಕೆರಡು ಬಾರಿ ಕಾಲೇಜಿನಲ್ಲಿ ಆಗುವ ಪ್ರತಿ ಭೇಟಿಯೂ ತುಂಬಾ ಅಪರೂಪ ಎನಿಸುತ್ತಿದ್ದದ್ದು. ನಿನ್ನನ್ನು ಒಂದ್ ಸಲಾನೂ ಫಿಲಂ ನೋಡೋಕಾಗಲಿ, ಸುತ್ತೋದಕ್ಕಾಗ್ಲಿ ಕರೀಬೇಕು ಅಂತಾನೆ ಅನ್ನಿಸ್ತಿರ್ಲಿಲ್ಲ, ಬಹುಶಃ ನಿನ್ನ ಸ್ವಭಾವ ಗೊತ್ತಿರೋದ್ರಿಂದ ನಂಗೆ ಸೋಲೋಕ್  ಇಷ್ಟ ಇರ್ಲಿಲ್ಲ. ಒಂದ್ ದಿನ ಸಿಕ್ದಾಗ ಏನೋ ಸಾಹಿತಿಗಳ ವಿಷಯ ಬಂತು.  ಜಯಂತ್ ಕಾಯ್ಕಿಣಿ ಏನ್ ಮಹಾ, ಬರೀ ಪ್ರೀತಿ ವರ್ಣಿಸಿ ಪದ್ಯ ಬರೀತಾರೆ ಅಂದಿದ್ದಕ್ಕೆ ಕೂಡಲೇ ನಿನ್ನ ಮೊಬೈಲ್ ನಲ್ಲಿರುವ ಕನ್ನಡ ಜೀವಸ್ವರ ಅನ್ನೋ ಹಾಡನ್ನ ಕೇಳಿಸಿ ಅದರಲ್ಲಿ ಬರುವ 'ವಿನಿಮಯ ಕನ್ನಡ ವಿನಯವೇ ಕನ್ನಡ ಮಹಿಳೆಯ ಸ್ವಾಭಿಮಾನ ಕನ್ನಡ' ಅನ್ನೋ ಸಾಲನ್ನು ವರ್ಣಿಸಿದ್ದು ಕೇಳಿ ನನ್ನ ಬಾವಿಯಲ್ಲಿರುವ ಕಪ್ಪೆ ಹೊರಗಡೆ ಹಾರಿದಂತಾಯ್ತು. ಸರಿಯಾಗಿ ತಿಳಿದುಕೊಳ್ಳದೆ ನಾ ಹೇಳೋದೇ ಸರಿ ಅನ್ನೋ ನನ್ನತನ ನಿನ್ನ ಮುಂದೆ ಸಣ್ಣದಾಯಿತು . ನೀನು ಒಂದ್ ಸಲ ಸುಮ್ನೆ ನಗ್ತಾ ಇದ್ದೆ, ಯಾಕೆ ಕೇಳಿದ್ರೆ ಮುಖ್ಯಮಂತ್ರಿ ಚಂದ್ರು ನಗೋ ಸೀನ್ ನೆನಪಾಯ್ತು ಅಂದಿದ್ದೆ . ಇನ್ನೊಂದ್ ದಿನ ಮಧ್ಯಾನ್ನ ಕಾಲೇಜಿನಲ್ಲಿ ನಿನ್ನ ಮಾತಾಡ್ಸೋಕೆ ಅಂತ ಬಂದಾಗ ಕಣ್ಣನ್ ಪೂರ್ತಿ ವದ್ದೆ ಮಾಡ್ಕೊಂಡ್ ಕೇಳಿದ್ದೆ, ಈ ಏಡ್ಸ್ ಇರೋ ಚಿಕ್ಕ ಮಕ್ಕಳದ್ದು ಎಂತ ದುರಂತ ಆಲ್ವಾ, ಅವರಿಗೆ ಇರೋ ರೋಗದ ಭೀಕರತೆ ಬಗ್ಗೆ ಗೊತ್ತಿಲ್ಲ, ತಾವ್ ಸ್ವಲ್ಪ ದಿನದಲ್ಲೇ ಸಾಯ್ತೀವಿ ಅಂತ ಗೊತ್ತಿಲ್ಲ, ಯಾಕ್ ಸಾಯ್ತೀವಿ ಅಂತ ಗೊತ್ತಿಲ್ಲ, ಯಾರ್ ತಪ್ಪಿಗೆ ತಾವ್ ಸಾಯಬೇಕು ಅಂತಾನೂ ಗೊತ್ತಿಲ್ಲ!  ನಮ್ ತಪ್ಪಿಗೆ ಶಿಕ್ಷೆ ಅನುಭವಿಸೋದ್ ಬಂದ್ರೆ ಕೆಲವೊಂದು ಸಲ ಸಹಿಸೋಕಾಗಲ್ಲ , ಅವ್ರು ಬೇರೆಯವರ ತಪ್ಪಿಗೆ ಜೀವಾನೇ ಕೊಡಬೇಕು.  ಜೀವನ ಎಷ್ಟು ಸುಂದರ ಅಲ್ವ ಅಂತ. ಅದರಲ್ಲಿ ಸುಂದರ ಅನ್ನೋದೇನ್ ಬಂತು ಅಂತ ಇನ್ನೂ ಅರ್ಥ ಆಗಿಲ್ಲ. ನಿನ್ನ ಮಾತ್ ಕೇಳಿ ನಾನೂ ಭಾವುಕನಾಗಿ ನಿನ್ನೇ ನೋಡ್ತಿದ್ದೆ,  ಊಟ ಆಯ್ತಾ ಕೇಳ್ದೆ ನೀನು , ಹೌದು ಅಂದೆ  ನಾನು, ಅಷ್ಟಕ್ಕೇ ನನ್ ತಲೆಗೂದಲಿನ ಅಸ್ತಿತ್ವ ಪ್ರಶ್ನಿಸಿದ್ದು ನಿಜಕ್ಕೂ ಶೋಚನೀಯ. ನೀನ್ ಒಂಥರಾ ನಂಗೆ ಎಲ್ಲ ಚಾನೆಲ್ ಗಳೂ ಪ್ರಸಾರವಾಗುವ ಏಕೈಕ ಟಿವಿ ಥರ ಇರ್ತಿದ್ದೆ. ನಿನ್ನ ಕೆಲವು ರೀತಿಗಳು ನಾ ಅಂದುಕೊಂಡಿದ್ದ ಪ್ರೀತಿಯ ವ್ಯಾಖ್ಯಾನವನ್ನೇ ಬದಲಿಸಿದವು.

                                   ಒಂದು ದಿನ ಸಂಜೆ ಅತ್ತ ದಿಗಂತದಲ್ಲಿ ಸೂರ್ಯ ಭಗವಂತನ ಪಾದ ಸೇರಲು ಹೊಂಚು ಹಾಕುತ್ತಿದ್ದರೆ ನೀನು ನನಗೆ ಒಲವಿನ ಅರಿವು ಮೂಡಿಸುವ ಸಲುವಾಗಿ ಕೇಳಿ ತಿಳಿ ಕಾರ್ಯಕ್ರಮ ಆಯೋಜಿಸಿದ್ದೆ. ನಾನೂ ಬೇರೆ ಉಪಾಯ ಹೊಳೆಯದ ಅಮಾಯಕನಂತೆ ಕೇಳಲಾರಂಭಿಸಿದೆ. "ಪ್ರೀತಿ ಅಂದ್ರೆ ಒಬ್ಬರನ್ನೊಬ್ಬರು ಬಿಟ್ಟಿರಲಾರದೆ ಇರುವಂಥದ್ದಲ್ಲ, ಪ್ರೀತಿ ಅಂದ್ರೆ  ಕನಸಲ್ಲೂ ಬಂದು ಕಾಡುವಂಥದ್ದಲ್ಲ, ಪ್ರೀತಿ ಅಂದ್ರೆ ಬೇರೆ ಕೆಲಸದಲ್ಲಿ ವ್ಯಸ್ಥವಾಗಿರುವಾಗಲೂ ಪದೇ ಪದೇ ನೆನಪಾಗುವುದಲ್ಲ, ಎಲ್ಲಕ್ಕಿಂತ ಮಿಗಿಲಾಗಿ ಪ್ರೀತಿ ಅಂದ್ರೆ ಬರಿ ಪ್ರೀತಿಸುವುದಷ್ಟೇ ಅಲ್ಲ!!  ನಿನ್ನ ನಿದ್ರೆಗೆ ಅಡ್ಡಿಯಾಗದಂತೆ, ನೀ ಮಾಡುವ ಕೆಲಸದಲ್ಲಿ ತೊಂದರೆಯಾಗದಂತೆ, ನಿನ್ನ ಸಮಯಹರಣಕ್ಕೆ ನೆಪವಾಗದಂತೆ ಇರುವ ರೀತಿ. ಪ್ರೀತಿ ಭರವಸೆ, ಪ್ರೀತಿ ಸಡಗರ, ಇರದ ಸಮಸ್ಯೆಗಳಿಗೆ ಇರುವ ಒಂದು ಪರಿಹಾರ. ನಿನ್ನನ್ನು ನೀನಾಗಿರಲು ಬಿಟ್ಟು ನನ್ನನ್ನೂ ನಿನಗೆಂದು ಇಟ್ಟು ನೀ ಬಯಸದಿದ್ದರೂ ಮಾಡಬೇಕೆನಿಸುವ ಉಪಕಾರ.  ನನ್ನಲ್ಲಿ ನಾನು ಹೇಗೋ, ನನ್ನಲ್ಲಿ ನೀನೂ ಕೂಡ ಎಂಬ ಭಾವನೆ" ಇಷ್ಟು ಹೇಳಿ ನಿನ್ನ ಪ್ರಕಾರ ಪ್ರೀತಿ ಅಂದರೆ ಏನು ಅಂದೆ,  "ನಾ ಹಂಸಲೇಖ ನೀ ಸರಳ ವಿರಳ ಸುಂದರಿ , ನಮ್ದು ರಾಗಿ ಹೊಲದಾಗೆ ಖಾಲಿ ಗುಡಿಸಲು" ನನ್ನ ಈ ಸಾಲಿಗೆ ನೀ ವ್ಯಕ್ತಪಡಿಸಿದ ಮುಖಭಾವ ನವರಸಗಳಿಗೂ ತಮ್ಮ ಖಾಲಿತನದ ಅನುಭವ  ಆಗುವಂತಿತ್ತು. 

                                                                           ಸಣ್ಣ ಪುಟ್ಟದ್ದನ್ನೂ ನೀ ನೋಡೋ ರೀತಿ, ಸಂತೋಷ ಅಂದ್ರೆ ಇಲ್ಲದೆ ಇರೋದು ಸಿಗೋದಷ್ಟೇ ಅಲ್ಲ ಅನ್ನೋದ್ ಗೊತ್ತಾಗೋ ಹಾಗೆ ಮಾದುತ್ತಿತ್ತು. ನಾ ಬದುಕನ್ನೇ ಪ್ರೀತಿಸಲಾರಂಭಿಸಿದ್ದೆ, ಬಹುಷಃ ಅಲ್ಲಿಂದಲೇ ನನ್ನ ಖುಷಿಯ ಅರ್ಥವೂ ಬದಲಾಗಿದ್ದು. ಯಾರೇ ನಿನ್ನ ಅಸ್ತಿತ್ವವನ್ನು ಪ್ರಶ್ನಿಸಿದರೂ ನೀ ಮಾತ್ರ ನನ್ನಲ್ಲಿ ಸದಾ ಪ್ರಸ್ತುತ. ಅಳುವ ಮಗುವಿನ ಕಣ್ಣಲ್ಲೂ, ಬಯ್ಯುವ ಅಪ್ಪನ ಮಾತಲ್ಲೂ, ಚೇಂಜ್ ಇಲ್ಲ ಅಂದರೂ ಪರವಾಗಿಲ್ಲ ಬಿಡಿ ಎಂದು ನಗುವ ತರಕಾರಿ ಅಂಗಡಿ ಹೆಂಗಸಿನ ಮನಸಲ್ಲೂ .  

Monday, January 20, 2014

"ಎಕ್ಸ್ ಕ್ಯೂಸ್ ಮಿ " ಎಂಬ ಕನ್ನಡ ಚಿತ್ರದ ಜನಪ್ರಿಯ ರಾಗಕ್ಕೆ ಸಾಲುಗಳನ್ನು ಸೇರಿಸುವ ೧ ಪ್ರಯತ್ನ!! ಆ ರಾಗವನ್ನು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ ನೀವೂ ಕೇಳಿ :

https://www.youtube.com/watch?v=vw2FgXcrOqk


ಜಾಹೀರಾಗದಿರೋ ಜೀವಕೆ ಒಲವೆ ಹೊಸ ವಿಷಯ . .
ಜಾರಿ ಹೋಗದಿರು ಮನವೇ ಪಡೆಯದೇ ಅನುಮತಿಯ  . . .

ಭಾವಕು ಜೀವವ ಕೇಳದೆ ನೀಡುವ ಕಾಣದ ಸಾಹಿತಿಯೆ..
ಮೌನದ ಮನಸಲೂ ಕನಸನು ಚಿಗುರಿಸೋ ಸುಂದರ ಮಾಹಿತಿಯೆ. .


Sunday, April 28, 2013

ನನ್ನ ಅವ(ನ)ಲೋಕನ

                                                                                  ಯಾರದೋ ಮೇಲಿನ ಅಸಮಾಧಾನಕ್ಕೆ ಕರೆಂಟ್ ಹೊಡೆದ ಕಾಗೆಯಂತಾಗಿ, ಕೋಪ ತಾಪಗಳ ಜೊತೆಗೆ ಬಹಳ ಬೇಸರವೆಂಬ ಬೇಗೆಯಲ್ಲಿ ನನ್ನನ್ನು ನಾನೇ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ! ಆವಾಗ ಕೋಣೆಯೊಳಗೆ ಬರುವ ಅಣ್ಣನ ಮಗು ಜೋಡಿಸಿಟ್ಟ ಪುಸ್ತಕಗಳನ್ನೆಲ್ಲ ಚೆಲ್ಲಾಪಿಲ್ಲಿಯಾಗಿ ಬಿಸಾಡಲು, ಆ ಮಗುವಿನ ಮೇಲೂ ಕೂಗಾಡುವಷ್ಟು ಕ್ರೂರಿಯಾಗಿರುತ್ತದೆ ಈ ಮನಸ್ಸು. ಎಷ್ಟೇ ಕಿರುಚಿದರೂ ಅರ್ಥಮಾಡಿಕೊಳ್ಳದ ಮಗುವಿನ ಮುಂದೆ ಸೋತು ಸುಣ್ಣವಾಗಿ..ಸಣ್ಣ ದನಿಯಿಂದ "ನಿಂಗ್ಯಾಕೆ ಎಷ್ಟ್ ಹೇಳಿದ್ರು ಅರ್ಥಾನೆ ಆಗಲ್ಲ" ಎಂದು ಕೇಳಿದಾಗ ಮಗು ಕೊಟ್ಟ ಉತ್ತರ "ನಾನಿನ್ನೂ ಚಿಕ್ಕವನು, ಅರ್ಥ ಆಗಲ್ಲ ನಂಗೆ" ಅಂತ !! ಅಷ್ಟೇ! ನಾನೇಕೆ ಹೀಗೆ ಎಂದು ನನ್ನನ್ನು ನಾನು ಕೇಳುವ ಮೊದಲೇ ಉತ್ತರ ಸಿಕ್ಕಂತಾಗಿ ಒಂದು ಖುಷಿಯ ನಗು ಮನಸ್ಸಿನಲ್ಲಿ ಸುಮ್ಮನೆ ಸರಿದು ಹೋಯಿತು.

ಎಷ್ಟೊಂದು ಸಲ ಇನ್ನೊಬ್ಬರನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವೇ ತಪ್ಪೆಂದು ಅನಿಸಿವುದು ಇದಕ್ಕಾಗಿಯೇ. ಅವ್ನ್ ಹೇಗೆ ಎಂದು ನಂಗ್ ಗೊತ್ತು ಅಂದ್ರೆ, ನಾನು ಅವನ ಬಗ್ಗೆ ನನಗನಿಸಿದ ಹಾಗೆ ತಿಳಿದುಕೊಂಡಿರುವುದೇ ಹೊರತು ಅವನ ಪರಿಪೂರ್ಣ ಪರಿಚಯವಾಗಿದೆ ಎಂದಲ್ಲ. ಅದಕ್ಕೇ! ಅವನು ಇಂದು ನಡೆದುಕೊಂಡಿರುವ ರೀತಿ ನನಗೆ ಬೇಜಾರು ಮತ್ತು ಕೊಪವನ್ನುಂಟು ಮಾಡಿರುವುದು! ತಪ್ಪು ಆಗಿರುವುದು ಅವನಿಂದಲ್ಲ, ಅರ್ಥಮಾಡಿಕೊಳ್ಳುವಲ್ಲಿ ಸೋತಿದ್ದೇನೆ ಎಂದು ನನಗೆ ಅರಿವಾಗಿದ್ದರಿಂದ! ಅವನು ಹೀಗೇ ಮಾಡಬೇಕೆಂದು ನನ್ನ ಮನಸ್ಸು ಬಯಸುವುದರಿಂದಾಗಿ, ಅವನಲ್ಲಿ ಆಗುವ ಚಿಕ್ಕ ಬದಲಾವಣೆಯೂ ಸಹಿಸಲಾಗದ ದೊಡ್ಡ ಅಪರಾಧವೆಂಬಂತೆ ಅನಿಸುತ್ತದೆ.

                                                                        ಅಷ್ಟಕ್ಕೂ ಬದಲಾವಣೆ ನಿಶ್ಚಲ, ಬದಲಾಗದಿರುವುದು ಕೆಲವು ನಿರ್ಜೀವಿ ಮಾತ್ರ. ಅವನ ಆ ಬದಲಾವಣೆ ನನಗೆ ಅವನನ್ನು ದ್ವೇಷಿಸುವಷ್ಟು ಅಸಮಾಧಾನ ಉಂಟು ಮಾಡುತ್ತದೆ ಎಂದಾದರೆ ನಾನು ಇಷ್ಟಪಡುತ್ತಿದ್ದದ್ದು ಅವನನ್ನೋ ಅಥವಾ ಅವನ ನಿರ್ದಿಷ್ಟ ನಡತೆಯನ್ನೋ!! ನಾನೇಕೆ ಆ ಕ್ಷಣಕ್ಕೆ ತಕ್ಕ ಹಾಗೆ ಪ್ರತಿಕ್ರಿಯಸದೆ ಯಾವಾಗಲೂ ಪೂರ್ವಾಗ್ರಹ ಮತ್ತು ಭವಿಷ್ಯತ್ತಿನ ಸರಾಸರಿ ತೆಗೆದು ಯೋಚಿಸಿ ವರ್ತಮಾನವನ್ನು ಅವಮಾನಿಸುತ್ತೇನೆ? ಹಠಾತ್ತಾಗಿ ಬರುವ ಅನಿರೀಕ್ಷಿತಕ್ಕೆ ನನ್ನ ಮನಸ್ಸು ಹೇಗೆ ಪ್ರತಿಕ್ರಿಯಿಸಬಹುದು ಎಂಬುದೇ ನನಗೆ ಅಸ್ಪಷ್ಟ, ಅಂದರೆ ನನಗೆ ನಾನೇ ಅರ್ಥವಾಗಿಲ್ಲ. ಇನ್ನು ಬೇರೆಯವರನ್ನು ಅರ್ಥಮಾಡಿಕೊಳ್ಳಬೇಕೆಂಬ ಹುಂಬ ಪ್ರಯತ್ನವೇಕೆ ! ! ೧೧:೧೦ ಎಂಬ ಸಮಯ ಮುಂದಿನ ನಿಮಿಷವೇ ಸುಳ್ಳು! ನಿನ್ನೆ ಕಣ್ಮನ ಸೆಳೆಯುತ್ತಿದ್ದ ಹೂವು ಇಂದಿಲ್ಲ.. ಇಂದು ಮಾಡಿದ ಅನ್ನ ನಾಳೆ ತಂಗಳು. ಸತ್ಯ ತಾತ್ಕಾಲಿಕ, ಕೆಲವು ಸತ್ಯ ಕ್ಷಣಿಕವಾದರೆ ಕೆಲವು ವಾರ್ಷಿಕ! ಆದ್ದರಿಂದಲೇ ಸುಳ್ಳು ಎನ್ನುವುದು ಪ್ರಚಲಿತ ಮತ್ತು ಸುಲಲಿತ.

                                ಸರಿಪಡಿಸಿಕೊಳ್ಳಲು ನನ್ನಲ್ಲೇ ಸಾಕಷ್ಟು ವಿಷಯಗಳಿರುವಾಗ ಮತ್ತೊಬ್ಬರ ಬದುಕನ್ನು ಅವರ ನೀತಿಯ ರೀತಿಯನ್ನು ಊಹಿಸಿ ನಿರ್ಧರಿಸುವ ವ್ಯರ್ಥ ಪ್ರಯತ್ನವೇಕೆ? ಇದು ಸಂತೋಷಹೀನನಾಗಲು ಇರುವ ಇನ್ನೊಂದು ಮಾರ್ಗವೆಂದು ಗೊತ್ತಿದ್ದೂ ಇಲ್ಲೇ ಕಾಲಿಡುವುದೇಕೆ? ಅವನು ಅವನಿಷ್ಟ ಬಂದ ಹಾಗೆ ಇದ್ದರೆ ಅವನನ್ನು ಸ್ವಾರ್ಥಿ ಎಂದು ಕರೆಯಲು ನಾನ್ಯಾರು? ಅಷ್ಟಕ್ಕೂ ನಿಸ್ವಾರ್ಥಿಯ ಅಸ್ತಿತ್ವ ಇರುವುದು ಎಲ್ಲಿ? ಪ್ರತಿಯೊಂದು ತಾಯಿ ಕೂಡ ಮಕ್ಕಳ ವಿಷಯ ಬಂದಾಗ ಬೇರೆಯವರ ದೃಷ್ಟಿಯಲ್ಲಿ ಸ್ವಾರ್ಥಿಯೇ! ಸ್ನೇಹವೂ ಸ್ವಾರ್ಥವೇ! ತನ್ನ ಸ್ನೇಹಿತನ ಸಂತೋಷವೇ ತನ್ನ ಸಂತೋಷ ಎನ್ನುವವನದೂ ಸ್ವಾರ್ಥವೇ ಅಲ್ಲವೇ? ಅವನು ಖುಷಿಯಾಗಿರಲು ಸ್ನೇಹಿತ ಖುಷಿಯಾಗಿರಬೇಕಷ್ಟೇ. ಅಂದಮಾತ್ರಕ್ಕೆ ಇನ್ನೊಬ್ಬರ ಸಂತೋಷ ಬಯಸದೆ ಇರುವವರೆಲ್ಲ ಸ್ವಾರ್ಥಿಗಳೇ? ಅವರವರ ಸಂತೋಷ ಮತ್ತು ದುಖ್ಖಕ್ಕೆ ಅವರವರೇ ಹೊಣೆಯಲ್ಲವೇ? ನನ್ನ ಆನಂದ ಅವನ ಮೇಲೆ ಅವಲಂಬಿತ ಎಂದಾದರೆ ಇದು ಬದುಕಿನ ಒಂದು ದುರಂತಗಳಲ್ಲೊಂದಲ್ಲವೇ!

ಯಾರೋ ಪುಣ್ಯಾತ್ಮ ಹೇಳಿದಂತೆ ಒಂದು ನಿಮಿಷದ ಬೇಸರಕ್ಕಾಗಿ ೬೦ ಕ್ಷಣಗಳ ಖುಷಿಯನ್ನು ಬಲಿಕೊಡುವುದು ನಿಜಕ್ಕೂ ಶೋಚನೀಯ. ಸಂಬಂಧ ಸಂಬಂಧಿಸಿದವರಿಗೆ ಮಾತ್ರ ಎನ್ನುವ ವಿಷಯ ಮರೆತು ನಾನೇಕೆ ಅವರ ಬಗ್ಗೆ ಯೋಚಿಸುವುದಲ್ಲದೇ ಅವರ ಬಗ್ಗೆ ಒಂದು ತೀರ್ಮಾನಕ್ಕೇ ಬಂದುಬಿಡುತ್ತೇನೆ? ಇನ್ನಾದರೂ ಬದುಕನ್ನು ಬಂದಂತೆ ಸ್ವೀಕರಿಸಬೇಕು, ಅವನು ಹೀಗೇ ಎಂದು ನಿರ್ಧರಿಸುವುದನ್ನು ಬಿಡಬೇಕು, ಬೇಸರಗೊಳ್ಳಲು ಕಾರಣ ಹುಡುಕುವುದನ್ನು ನಿಲ್ಲಿಸಬೇಕು, ಕೆಲಸ ಇಲ್ಲದೆ ಸುಮ್ಮನಿರೋ ಸಮಯವನ್ನು ಯಾವುದಾದರೂ ಹವ್ಯಾಸಕ್ಕಾದರೂ ದಾನ ಮಾಡಬೇಕು, ಸಂಬಂಧ ಎನ್ನುವುದು ಬಂಧನ ಅನಿಸುವ ಮೊದಲೇ ಬಿಡುಗಡೆ ಹೊಂದಬೇಕು, ಅಷ್ಟಕ್ಕೂ ನನ್ನ ಬಗ್ಗೆ ನಾನು ಯೋಚಿಸದೆ ಅವ್ನಾ ಯೋಚಿಸ್ತಾನೆ? ?

Saturday, February 23, 2013

ಗೆಲುವೇ ಕಳುವಾಗಿದೆ. . .

"ಇಷ್ಕಿಯಾ" ಎಂಬ ಹಿಂದಿ  ಚಿತ್ರದ "ದಿಲ್ ತೋ ಬಚ್ಚಾ ಹೇ ಜಿ" ಹಾಡಿನ ಧಾಟಿಗೆ ಕನ್ನಡದ ಸಾಲುಗಳನ್ನು ಸೇರಿಸುವ ೧ ಪ್ರಯತ್ನ!! ಮೂಲ ಹಾಡನ್ನು ಕೊಂಡಿಯನ್ನು ಕ್ಲಿಕ್ಕಿಸಿ ನೀವೂ ಕೇಳಿ :

http://www.youtube.com/watch?v=BgWaZ0W_1zI

ಮನದ ಅತಿಕ್ರಮಣ ನಿನ್ನಿಂದ ಮೊದಲಾಗಿದೆ. . 
ನಿನ್ನ ಕಡೆ ಗಮನ ಅರಿವಿರದೆ ಅತಿಯಾಗಿದೆ . .
ಇರದ ಭಾವನೆಗೂ ಕರೆಮಾಡೋ ಮನಸಾಗಿದೆ. . 
ಭಾವದ ಸಂಪುಟಗಳ ಸಂಪಾದಕಿ ಸಿಕ್ಕಂತಿದೆ. . 

ನಿನ್ನಾ ಪ್ರತಿಫಲನ..  ಕಾಣಲು ಪದೆ ಪದೆ ನಾ. .
ಹೊಸ ರೀತಿಯ ಜನನ.. ಮಾತೆಲ್ಲವೂ ಮೌನ. .
ಸಂಕಟವೂ  ಸಂಭ್ರಮವೂ  ಹೊಸದಾಗಿದೆ. .
ಮನಸು ಮಗುವಾಗಿದೆ.. ಮನಸು ಮಗುವಾಗಿದೆ. .
ಕನಸು ಕಳುವಾಗಿದೆ.. ಮನಸು ಮಗುವಾಗಿದೆ. .

ಪ್ರೀತಿಯ ಕಂದಾಯ ಮಾಡಲು ಸಂದಾಯ.. ಪರಿತಪಿಸುತಿದೆ ನSSನ್ನ ಕಾಯ. .
ಬೇಗನೆ ಸ್ವೀಕರಿಸಿ ನನ್ನನು ಉಪಕರಿಸು.. ಹಾಳಾದರು ಸರಿ ನಿನ್ನ ಸಮಯ. .
ಮನದ ಅಂತಃಪುರ. . ಆವರಿಸಲೇ ನಾ ಪೂರಾ. .
ಬೇಡ ಸರಿಯುತ್ತರ. . ಗೊಂದಲಗಳೇ ಸುಂದರ. .
ಗುರಿಯೇ ಇರದಾSSS.. ಸಂಚಾರೀ ಆದೆನಾSS . .

ಹಳತಾಗದ ಒಡವೆ. .  ನಿನ್ನಾ ಈ ನಗುವೇ. .
ಬಗೆಹರಿಯದು ಒಲವೆ !! ಪರಿಹರಿಸೆಯಾ ಚೆಲುವೆ. .

ತಡವಾದರೂ ತಡೆ ನೀಡದೆ ಬರಬಾರದೇ??. .
ಗೆಲುವು ಕಳುವಾಗಿದೆ.. ಗೆಲುವು ಕಳುವಾಗಿದೆ. .
ಒಲವು ಬಲವಾಗಿದೆ.. ಗೆಲುವು ಕಳುವಾಗಿದೆ. .

ನಿನ್ನಂತರಾಳSSS  ನೀಡುವ ಈ ಪ್ರೀತಿ ಎಷ್ಟೇ ಆದರೂ ಸಾಲದ ಸಾಲ. .
ಅದು ಕಡಿಮೆ ಎನಿಸಿ ನಿನ್ನನೆ ನಾ ಮತ್ತೆ ಕೇಳುವ ಮೊದಲೇ ನೀಡು ಬಹಳ. .
ನಿನ್ನ ಆ ಮುಂಗುರುಳ.. ಸರಿಪಡಿಸಲೇ ಒಂದು ಸಲ. .
ಕಂಡೆನು ಬೆಳದಿಂಗಳ.. ನೋಡುತ ಈ ಕಂಗಳ. . 
ಮರೆತು ಕೂಡSS.. ನೀ ಮರೆಯಾಗಲೆಬೇಡSS . .

ನೀನಿರದಾ ದಿವಸ. . ನೆನಪಿಗೆ ಶುರು ಕೆಲಸ . .
ಅಪರೂಪದ ವಿರಸ. . ಕಂಗೆಡಿಸಿದೆ ಮನಸಾ..
ಕಲುಷಿತವೋ ಬಲುಹಿತವೋ ಅರಿವಾಗದೇ!!
ಮನಸೇ ಮಗುವಾಗಿದೆ..ಕನಸೇ ಕಳುವಾಗಿದೆ. .
ಒಲವು ಬಲವಾಗಿದೆ.. ಮನಸೇ ಮಗುವಾಗಿದೆ. 

Tuesday, November 13, 2012

ಅದೇ ರೀತಿ ಬೇರೆ ಪ್ರೀತಿ

                                                                  ಅಂದು ದೀಪಾವಳಿಯ ಸಂಜೆ ಸಮಯ 7.34 ಆಗುವ ಮೊದಲೇ ಅವನು ಕೆನ್ನೆಯ ಮೇಲೆ ಕೈ ಇಟ್ಟು ಕುಳಿತಿದ್ದ. ಅವನಿಗೆ ಪಟಾಕಿ ಮಾಡುತ್ತಿರುವುದೆಲ್ಲ ಶಬ್ದವೇ ಅಲ್ಲ ಅನಿಸುತ್ತಿತ್ತು. ಅದರಿಂದ ಉಂಟಾಗುವ ಬೆಳಕೂ ಒಂದು ದೊಡ್ಡ ಸುಳ್ಳಿನಂತೆ ಗೋಚರಿಸುತ್ತಿತ್ತು, ಆ ಬೆಳಕಿನ ಹಿಂದಿರುವ ಕತ್ತಲು ಮನಸ್ಸಿಗೆ ಹತ್ತಿರವೆನಿಸಿ ಅದೇ ಪರಮ ಸತ್ಯದಂತೆ ಕಾಣುತ್ತಿತ್ತು,ಏಕೆಂದರೆ ಅವನು ಸತ್ಯವನ್ನು ತುಂಬಾ ಪ್ರೀತಿಸುತ್ತಿದ್ದ,ಸುಳ್ಳಿಗೂ ಹೊಟ್ಟೆ ಕಿಚ್ಚಾಗುವಷ್ಟು!! ಅಂತಹ ಕತ್ತಲನ್ನೂ ಕ್ಷಣಕಾಲ ಸುಳ್ಳಾಗಿಸಲು ಪ್ರಯತ್ನಿಸುತ್ತಿರುವ ಪಟಾಕಿಯ ಮೇಲೆ ತಾತ್ಕಾಲಿಕ ಕನಿಕರ ಉಂಟಾಗುತ್ತಿತ್ತು...
                                                 ಅವನು ಎಂದಿನಂತೆ 90A ನಂಬರಿನ ಖಾಲಿ ಬಸ್ ನಲ್ಲಿ ಕುಳಿತು ತೂಕಡಿಸುತ್ತಿದ್ದ, ತುಂಬ ಹೊತ್ತು ಬಸ್ ಚಲಿಸದೆ ನಿಶ್ಚಲ ಸ್ತಿತಿಯಲ್ಲಿ ಇರುವುದರಿಂದ ಸೆಕೆ ಎಂದೆನಿಸಿ ನಿದ್ರಾಭಂಗಗೊಂಡು ತಲೆ ಎತ್ತಿ ಒಮ್ಮೆ ಕಿಟಕಿಯಿಂದ ಹೊರನೋಡಿದ, ಮತ್ತದೇ ಟ್ರಾಫಿಕ್ ಎಂದು ಮನದಲ್ಲೇ ಗೊಣಗಿ ಪಕ್ಕದಲ್ಲೇ ನಿಂತಿದ್ದ ಬಸ್ ಕಡೆಗೆ ನೋಡಲು, ಅಪರಿಚಿತವಾದರೂ ಪರಿಚಯವಾಗಲೆಬೇಕೆಂದೆನಿಸುವ ಒಂದು ಮುಖ ತನ್ನನ್ನೇ ನೋಡುತ್ತಿರುವುದು ಸ್ಪಷ್ಟವಾಯಿತು, ಅವಳು ನಿಂತಲ್ಲಿಂದಲೇ ಕಣ್ಣಿನ ಮೂಲಕ ಕೊಲೆ ಮಾಡಲು ತಯಾರಾಗಿರುವಂತೆ ನೋಡುತ್ತಿದ್ದಳು, ಇವನೋ, ಜೀವನದಲ್ಲಿ ಮೊದಲ ಬಾರಿಗೆ 1 ಸುಂದರ ಹುಡುಗಿ ತನ್ನನ್ನು ಈ ರೀತಿ ನೋಡುತ್ತಿರುವುದನ್ನು ಕಂಡು ಆತ್ಮಹತ್ಯೆಗೆ ಸನ್ನದ್ಧನಾಗಿದ್ದ. ಒಟ್ಟಿನಲ್ಲಿ ಅಲ್ಲೊಂದು ಸಾವಿಗೆ ಮುನ್ನುಡಿ ಬರೆದಾಗಿತ್ತು!! ಬಸ್ ಚಲಿಸಲಾರಂಭಿಸಿತ್ತು , ಅವಳಿರುವ ಬಸ್ ಬಲಕ್ಕೆ ತಿರುಗಿ ಹೋದರೆ ಇವನ ಬಸ್ ನೇರವಾಗಿ ಮುಂದೆ ಸಾಗಿತು, ಅವನಿಗೆ ಸಂಪೂರ್ಣವಾಗಿ ಎಚ್ಚರವಾಗುವ ಮೊದಲೇ ಘಟಿಸಿದ್ದ ಘಟನೆಗೆ ಮನಸ್ಸು ತಲ್ಲಣಗೊಂಡಿತ್ತು, ಇದು ಪ್ರೀತಿ ಎಂದೆನಿಸುವುದಾದರೆ 5 ತಿಂಗಳ ಹಿಂದಷ್ಟೇ ಹೇಳಿದರೂ ಕೇಳದೆ ಬಿಟ್ಟು ಹೋದ ಅವಳ ಜೊತೆ ಇದ್ದಿದ್ದು?? ಪ್ರೀತಿಗೂ ಪುನರ್ಜನ್ಮ ಇರಬಹದು ಎಂದುಕೊಂಡು ಸುಮ್ಮನಾದ..
                      ಮತ್ತೆ ಹೊಸದಾಗಿ ಪ್ರೀತಿ ಶುರುಮಾಡಲು ಮನಸ್ಸು ಹಿಂದೇಟು ಹಾಕುತ್ತಿತ್ತು, ಆದರೂ ಅವಳ ಆ ನೋಟ ಕಣ್ಣಿನ ಕ್ಯಾಮರಾದಲ್ಲಿ ಸೆರೆಯಾಗಿ ಹೃದಯದಲ್ಲಿ ಮುದ್ರಣಗೊಳ್ಳಲು ತುದಿಗಾಲಲ್ಲಿ ನಿಂತಂತಿತ್ತು!! ಇದರ ಕುರಿತು ಮತ್ತೆ ಯೋಚಿಸಬಾರದೆಂದು ನಿರ್ಧರಿಸಿದ. ಸಾವು ಮೊದಲೇ ನಿರ್ಧಾರವಾದಾಗ ತಡೆಯಲು ಯಾರಿಂದಲೂ ಸಾಧ್ಯವಿಲ್ಲವೆಂಬಂತೆ ಅದೇ ಮುಖ ಅವನು ಕೆಲಸ ಮಾಡುವ ಜಾಗದಲ್ಲಿ ಮರುದಿನವೇ ಕಂಡಿತು! ಕಾಕತಾಳೀಯಕ್ಕೊಂದು ಉದಾಹರಣೆ ಎಂಬಂತೆ ಅವಳೂ ಸಹ ಅಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು.  ಇಬ್ಬರೂ ಪ್ರತಿದಿನ ಲೆಕ್ಕವಿಲ್ಲದಷ್ಟು ಸಲ ಪರಸ್ಪರ ದೃಷ್ಟಿಯುದ್ಧ ಮಾಡಿಕೊಂಡರೂ ಮಾತಿಗೆ ಮುಂದಾಗಲಿಲ್ಲ, ಅವನಿಗೆ ಎಂದೂ ಅವಳನ್ನು ಮಾತನಾಡಿಸಬೇಕು,ಅವಳ ಬಗ್ಗೆ ತಿಳಿದುಕೊಳ್ಳಬೇಕು ಎಂದೆಲ್ಲ ಅನಿಸಲೇ ಇಲ್ಲ, ಮೌನ ಸಂಭಾಷಣೆ ಮನಸ್ಸಿಗೆ ಇನ್ನಿಲ್ಲದ ಖುಷಿ ಕೊಡುತ್ತಿತ್ತು, ಅವಳು ಎಂದೂ ಅವನನ್ನು ನೋಡಿ ನಕ್ಕಿದ್ದಿಲ್ಲ,ಅವಳಿಗೆ ತನ್ನ ಮೇಲೆ ಪ್ರೀತಿ ಇದೆಯೋ ಇಲ್ಲವೋ ಎಂಬುದೂ ಅವನಿಗೆ ಅನವಶ್ಯಕ ಸಂಗತಿಯಾಗಿತ್ತು. ಸುಮಾರು 4 ತಿಂಗಳವರೆಗೂ ಮನಸಲ್ಲೇ ಮೌನವಾಗಿ ಪ್ರೀತಿಸುತ್ತಿದ್ದ ಅವನೆದುರು 1 ದಿನ ಬೆಳಿಗ್ಗೆ ಅವಳು ಬಂದು ನಿಂತಳು, ಅವನಿಗೆ ಇಷ್ಟು ದಿನದ ಮೌನದ ಧ್ಯಾನ ಕೊನೆಗೊಳ್ಳುವ ಎಲ್ಲ ಸೂಚನೆಯೂ ಕಂಡು ಬಂತು,ಅವಳನ್ನು ಅಷ್ಟು ಹತ್ತಿರದಿಂದ ನೋಡಿದ್ದೂ ಅಂದೇ!! ಇದೇ ತಿಂಗಳ 28ಕ್ಕೆ ನನ್ನ ಮದುವೆ ದಯವಿಟ್ಟು ಬನ್ನಿ ಎಂದು ಮರಣೋತ್ತರ ದಾಖಲೆಯಂತಿದ್ದ ಆಮಂತ್ರಣ ಪತ್ರಿಕೆಯನ್ನು ಕೈಗಿತ್ತಳು!! ಅವನಿಗೆ ಮೌನ ಮುರಿಯುವ ಅವಕಾಶವೇ ಕೊನೆಗೊಂಡಿತು, ಸುಮ್ಮನೆ ನಕ್ಕು ಸರಿ ಎಂಬಂತೆ ತಲೆ ಆಡಿಸಿದ.ಸುಮಾರು ಆ ತಿಂಗಳ ಕೊನೆಯವರೆಗೂ ನಗುತ್ತಲೇ ಇದ್ದ, ಒಂಟಿಯಾಗಿ!! ಅವನ ಪಾಲಿಗೆ ನಗುವೂ ಅರ್ಥ ಕಳೆದುಕೊಂಡಿತ್ತು,ಎಲ್ಲವೂ ಸುಳ್ಳು ಎಂದೆನಿಸತೊಡಗಿತ್ತು..
                                                        ಹೀಗೆ ಸುಳ್ಳು ಮತ್ತು ಸತ್ಯದ ಸಂಶೋಧನೆಯಲ್ಲಿ ಸಮಾಧಾನ ಸಿಗದೇ ಹೊರಗಡೆ ಪಟಾಕಿಯ ಆರ್ಭಟವನ್ನು ನಿರ್ಲಿಪ್ತವಾಗಿ ನೋಡುತ್ತಿದ್ದ ಅವನಿಗೆ ತರಕಾರಿ ತರಲು ಅಮ್ಮ ಹೇಳಿದ್ದು ನೆನಪಾಗಿ ಹೊರಟು ನಿಂತ. ಹೀಗೆ ಹೋಗುತ್ತಿರುವಾಗ ದಾರಿಯಲ್ಲಿ ಏನೋ ಒಂದು ಮುಖ ಕಂಡಂತಾಗಿ ಸ್ವಲ್ಪ ಮುಂದಕ್ಕೆ ಹೋಗಿ ಏನೋ ಕಳೆದುಕೊಂಡವರಂತೆ ನಿಂತುಬಿಟ್ಟ!! ಅದೇ ಪಟಾಕಿಯ ಬೆಳಕಿನಲ್ಲಿ ಕಂಡ ಆ ಮುಖ ಮನಸ್ಸು ಬಯಸಿದ್ದ ನಿಜವಾದ ಸತ್ಯದಂತಿತ್ತು. ಆ ಕಣ್ಣಿನಲ್ಲಿರುವ ತೇಜಸ್ಸು ಕತ್ತಲೆಯನ್ನೂ ಮರೆಸುವಂತಿತ್ತು, ಅವನಿಗೆ ಮತ್ತೊಮ್ಮೆ ಒಲವಿನ ಅನುಭವ ಆರಂಭವಾದಂತಿತ್ತು. ಕನಿಕರ ಪಡುವ ಸರದಿ ಈಗ ಪಟಾಕಿಯದ್ದಾಗಿತ್ತು!!

Sunday, June 3, 2012

ಕಾಲ್ಪನಿಕ

"ವಾರಣಂ ಆಯಿರಂ" ಎಂಬ ತಮಿಳ್  ಚಿತ್ರದ "ನೆಂಜಕ್ಕುಲ್  ಪೈದಿಡುಂ ಮಾಮಾರೈ" ಹಾಡಿನ ಧಾಟಿಗೆ ಕನ್ನಡದ ಸಾಲುಗಳನ್ನು ಸೇರಿಸುವ ೧ ಪ್ರಯತ್ನ!! ಆ ಹಾಡಿನ ಅನುವಾದ  ಅಂತೂ ಖಂಡಿತ ಅಲ್ಲ.. ಮೂಲ ಹಾಡನ್ನು ಕೊಂಡಿಯನ್ನು ಕ್ಲಿಕ್ಕಿಸಿ ನೀವೂ ಕೇಳಿ :

https://www.youtube.com/watch?v=FzLpP8VBC6E

ಸಂಗೀತ--ಹ್ಯಾರಿಸ್ ಜಯರಾಜ್                                       ಗಾಯಕ --ಹರಿಹರನ್ 

ರೂಪವ ತಾಳಿದ ರೂಪಕ ...ನೋಡುವುದೊಂದೇ ಕಾಯಕ..
ಆದೆನು ಪ್ರೀತಿ ನಿರೂಪಕ... ಮುಂದೆಲ್ಲ ಕಾಲ್ಪನಿಕ....
ಮಾತಲ್ಲೂ ಮೌನವ ಹುಡುಕಿದೆ..ಮೌನದಿ ಹಾಡನು ಗುನುಗಿದೆ..
ಹಾಡಿನ ಪಲ್ಲವಿ ನನ್ನದೇ,,,ಚರಣದ ಕೊರತೆಯಿದೆ..

ಓಂ ಶಾಂತಿ ಶಾಂತಿ ಓಂ ಶಾಂತಿ ..  ಸರಿ ಇರದಾ ರೀತಿ ಈ ಪ್ರೀತಿ..
ಕಂಗಳ ತುಂಬಿರಲು ನೀ ಪೂರ್ತಿ  .. ಒಲವಿನಲಿ ನಾನು ಬಲು ಸ್ವಾರ್ಥಿ..

ಮೂಡಿತೊಂದು,, ಮಂದಹಾಸ..ನಿಜವಾ ಇದು ,,ಅಥವಾ ಕನಸಾ??
ಬಣ್ಣಿಸಲು,, ಸಿಗದೇ ಪ್ರಾಸ ...ಖಾಲಿಯಾದ,, ಕಾಳಿದಾಸ!!
ಇರುಳಲ್ಲು ಮರುಳಾದೆ ನೀ ನಾಚಿ ಕರೆವಾಗ..ನೋಡುತ್ತಾ ಬೆರಗಾದೆ ನೀ ಸನಿಹ ಬರುವಾಗ..
ಚಿಂತೆಯು ಚಿಗುರಿತು ನಗುವ ಕಂಡು....ನಿಂತಲ್ಲೇ ನಿಂತೆನು ಪುಳಕಗೊಂಡು!!

ಪರಿಚಯದಾ ಪರಿಗೆ ಶರಣಾದೆ..  ಅರಿವಿರದೆ ನಿನಗೆ ಸೆರೆಯಾದೆ
ಅಳಿಸದಿರೋ ಚಿತ್ರ ನೀನಾದೆ..  ಸವಿಯುತ್ತಾ ನಾನು ಮೂಕಾದೆ!!

ಮುಗಿಲಲ್ಲಿರೋ ವಿಹಗದಂತೆ..ಮಡಿಲಲ್ಲಿರೋ ಮಗುವಿನಂತೆ..
ನೀರಲ್ಲಿರೋ ಮೀನಿನಂತೆ..ಒಳಗಿರಲು ನೀ ಏಕೆ ಚಿಂತೆ..
ಮಿಂಚಂತೆ ನೀ ಬಂದೆ ಕಿಂಚಿತ್ತೂ ಸುಳಿವಿರದೆ..ಈ ಮನದ ಸಂಚಿಕೆಗೆ ನೀನೇ ಮುಖಪುಟವಾದೆ..
ತಿರು ತಿರುಗಿ ಕಾಡುವ  ನೆನಪು ನೀನು.. ಕನಸಲ್ಲಿ ಬರೆದ ಪತ್ರ ತಲುಪಿತೇನು??

ನೀ ಇರಲು ಎಂದೂ ಜೊತೆಯಲ್ಲಿ..ಬೇರೇನೂ ಬೇಡ ನನಗಿಲ್ಲಿ..
ಇದು ಹಠವೋ ಚಟವೋ ತಿಳಿದಿಲ್ಲ..ನೀನಿರದಾ  ಕ್ಷಣವೇ ನಾನಿಲ್ಲ...

Tuesday, May 31, 2011

ತಪ್ಪಿದ ಅನುಪಾತ

ಮಿಸ್ಟರ್ ಪರ್ಫೆಕ್ಟ್ ಎಂಬ ತೆಲುಗು ಚಿತ್ರದ "ಚಲಿ ಚಲಿಗಾ ಅಲ್ಲಿಂದಿ" ಹಾಡಿನ ಧಾಟಿಗೆ ಕನ್ನಡದ ಸಾಲುಗಳನ್ನು ಸೇರಿಸುವ ೧ ಪ್ರಯತ್ನ!! ಮೂಲ ಹಾಡನ್ನು ಕೊಂಡಿಯನ್ನು ಕ್ಲಿಕ್ಕಿಸಿ ನೀವೂ ಕೇಳಿ :
https://www.youtube.com/watch?v=QjFaC76B2sc
ಸಂಗೀತ--ದೇವಿಶ್ರೀ ಪ್ರಸಾದ್ 
ಗಾಯಕಿ--ಶ್ರೇಯಾ ಘೋಶಾಲ್ 


ನಲಿ ನಲಿವಾ ಕನಸೊಂದು ಸನಿ ಸನಿಹ ಬಂದಂತೆ ಕಂಡಿರುವ ಕನಸೆಂಥಾ ಸೊಗಸು
ಪ್ರತಿ ಪುಟದಲ್ಲೂ ನಿನ್ನ ಹೆಸರನೆ ಬರೆವಾ ಚಟವು ಅತಿಯಾಗಿದೆ ಕಾಗದವ ಕಳಿಸು
            ಪರಿವಿಡಿ ಮುನ್ನುಡಿಯಲ್ಲೂ ನೀನೇನೇ...
            ಸೆಳೆಯುವ ತೆರೆಗಳ ಹಾಗೆ ನೀssನುsss ..
            ಒಲವಿನ ಪರಿಧಿಯ ಹೊರಗೆ ಬರದೇನೇ
            ಪರದೆಯ ತೆರೆಯದೆ ಇರಲೇನುsss ...
ನನ್ನ ಕಣ್ಣಲ್ಲಿ ಕಣ್ಣಿಟ್ಟು ಮನಸನ್ನು ಅಡವಿಟ್ಟು ಮೌನಕ್ಕೆ ಕಿವಿಗೊಟ್ಟು ಆsssಲಿಸು...
ಸಣ್ಣ ಪಯಣಕ್ಕೆ ಅಡಿಯಿಟ್ಟು ಏಕಾಂತ ಬಲಿ ಕೊಟ್ಟು ನನ್ನನ್ನು ದಯವಿಟ್ಟು ನೀನೇ ಸಹಿಸು.



ಪರಿಚಯದ ದಿನವೇ ಮರೆತೆನು ನಾ ಜಗವೆ..
ಏನೇ ನೀ ಹೇಳು... ನಾ ಕೇಳುವೆ..
ಅತಿಯಾದ ಗಮನ ಬಯಸಿದೆ ಈ ನಯನ 
ನೀಡಿ ಉಪಕರಿಸು ಉಳಿದೆಲ್ಲ ದಿನ..
            ನಿನ್ನ ನೋಡಿ ಆ ಸೂರ್ಯನು ಮೋಡಿ..
            ಬಂದನು ಓಡೋಡಿ ಬೆಳಕನು ಬೇಡಿ
            ಬಂದಂತೆ ಹಾಡಿ ಬಿಡದಂತೆ ಕಾಡಿ
            ಕೊನೆವರೆಗೂ ಜೊತೆ ಬರುವೆ ನೀ ಮುಂದೆ ನಡಿ..
ನನ್ನ ಕಣ್ಣಲ್ಲಿ ಕಣ್ಣಿಟ್ಟು ಮನಸನ್ನು ಅಡವಿಟ್ಟು ಮೌನಕ್ಕೆ ಕಿವಿಗೊಟ್ಟು ಆsssಲಿಸು...
ಸಣ್ಣ ಪಯಣಕ್ಕೆ ಅಡಿಯಿಟ್ಟು ಏಕಾಂತ ಬಲಿ ಕೊಟ್ಟು ನನ್ನನ್ನು ದಯವಿಟ್ಟು ನೀನೇ ಸಹಿಸು.



ಸಿಹಿಯಾದ ಸಲುಗೆ ನೀಡುವೆಯಾ ನನಗೆ
ಬದಲಾಗಿ  ನಿನಗೆ ನೀಡಲೇ ತೆರಿಗೆ!!
ಸರಿಯಾದ ಕಡೆಗೆ ಬೇಕಿಲ್ಲ ನಡಿಗೆ
ನೀ ಇದ್ದರೆ ಸಾಕು ನನ್ನ ಜೊತೆಗೆ...
            ಭಾವದ ಏರಿಳಿತ ಆಗಲು ವಿಪರೀತ
            ತಪ್ಪಿದೆ ಅನುಪಾತ  ನಾ ಶರಣಾಗತ...
            ಬೇಕಿದೆ ಸಂಗಾತ ಕೇಳುತ ಸಂಗೀತ
            ಪರಿಚಿತರು ಜೊತೆಗಿರಲು ಸಂತಸ ಖಚಿತ
ನನ್ನ ಕಣ್ಣಲ್ಲಿ ಕಣ್ಣಿಟ್ಟು ಮನಸನ್ನು ಅಡವಿಟ್ಟು ಮೌನಕ್ಕೆ ಕಿವಿಗೊಟ್ಟು ಆsssಲಿಸು...
ಸಣ್ಣ ಪಯಣಕ್ಕೆ ಅಡಿಯಿಟ್ಟು ಏಕಾಂತ ಬಲಿ ಕೊಟ್ಟು ನನ್ನನ್ನು ದಯವಿಟ್ಟು ನೀನೇ ಸಹಿಸು.

Monday, February 21, 2011

ಉತ್ಪಾತ

ಮನಸಿನ   ಕನಸಿನಲಿ  ಮೌನದ  ಪತನ
ಭಾವಗಳ  ಕೆಲಸ  ಬರೀ  ಶಬ್ದೊತ್ಖನನ


ಒಲವ ಪರಿಧಿಯಿಂದ ಜಾರಿ ಹೋಗಿದೆ ಒಂದು ಬಿಂದು . . 
ಹುಡುಕಿ ತರುವ ಕಾರ್ಯದಲ್ಲಿ ನಿರತ.. ಜೀವ ನೊಂದು . . 



ನೀನು  ಬಂದಾಗ ಆದ ಗೆಜ್ಜೆಯ ಸದ್ದಿಗೆ ಬರುವಂತಿದ್ದ ಸುಂದರ ನಿದ್ದೆಯು ರದ್ದಾಗಿದೆ.
ಕನಸಿನ ಅಂಕಣಗಳಿಗೆ ಸುಂದರ ಶೀರ್ಷಿಕೆ ನೀಡಲು ನಿನ್ನಂಥ ಭಾವುಕ ಸಂಪಾದಕಿ ಬೇಕಾಗಿದೆ