Tuesday, April 12, 2016

ಅಸಮಾನ

                                                                ತಲೆಯು  ದಿಂಬನ್ನು ಸಂಧಿಸಿದ ಹಾಗೂ ಕೈ ಕಿಟಕಿಯ ಗಾಜನ್ನು ಸರಿಸಿದ ಕ್ಷಣಗಳೆರಡೂ ಬೇರೆಬೇರೆಯಾಗಿದ್ದರೂ ಅದರಿಂದ  ಗಾಳಿಯ ಪ್ರವೇಶ ಮೊದಲಾದ  ಮತ್ತು ಬಸ್ಸಿನ ಒಳಗಿನ ದೀಪ  ಮರೆಯಾದ ಕ್ಷಣಗಳು ಒಂದೇ ಆಗಿದ್ದವು.

 ಗಾಜನ್ನೇ ಸರಿಸಿದವನಿಗೆ ಕರ್ಟನ್ ಸರಿಸುವುದು ಒಂದು ವಿಷಯವೇ ಅಲ್ಲ. ಬಿಳಿ earphone ಅಲ್ಲಿ  ನಮ್ಮ ವಿಜಯ್ಪ್ರಕಾಶ್  ನಮ್ಮದಲ್ಲದ ಭಾಷೆಯಲ್ಲಿ ಹಾಡುತ್ತಿದ್ದ. ಕಬ್ಬಿಣದ ಸರಳೊಂದು ನನ್ನ  ಆಕಾಶವನ್ನು  ದಿಟ್ಟಿಸುವ ನೋಟಕ್ಕೆ ಉಂಟುಮಾಡುತ್ತಿದ್ದ  ಆಭಾಸ, ಕಡಿಮೆ ಸಿಗ್ನಲ್ ನಲ್ಲಿ  FM Rainbow ಕೇಳಿದಂತಿತ್ತು.   ಪಕ್ಕದ ಸೀಟಿನಲ್ಲಿ ನಿರಾತಂಕವಾಗಿ  s/o ಸತ್ಯಮೂರ್ತಿ ಸಿನಿಮಾವನ್ನು ದೊಡ್ಡ ಧ್ವನಿಯೊಂದಿಗೆ ನೋಡುತ್ತಿದ್ದ ಇಬ್ಬರೂ ಎಲ್ಲರ ನಿದ್ರೆಗೂ ಸರಾಗವಾಗಿ ಅಡ್ಡಿಪಡಿಸುತ್ತಿದ್ದಂತಿತ್ತು. ನಕ್ಷತ್ರಗಳ ಸಂತೆಗೆ  ಆಮಂತ್ರಣರಹಿತನಾಗಿ ಹೋಗಲು  ಸಿದ್ಧನಾಗಿದ್ದೆ. ಇನ್ನೆನು  ಏನೇನಿದೆ  ಅಂತ  ನೋಡಬೇಕು, ಅಷ್ಟರಲ್ಲಿ ಒಂದು  ನಕ್ಷತ್ರ  ನನ್ನನ್ನೇ ಸೆರೆಹಿಡಿದಂತಿತ್ತು. ನಾ ಮಲಗಿದ್ದ ಬಸ್ ಎಷ್ಟೇ ವೇಗವಾಗಿ ಹೋಗುತ್ತಿದ್ದರೂ  ಆ ನಕ್ಷತ್ರ ಮಾತ್ರ  ನನ್ನ  ಕಣ್ಣಳತೆಯಲ್ಲೇ ಇದ್ದು ನಾ ಬೇರೇನನ್ನೂ ನೋಡದಂತೆ ನೋಡಿಕೊಳ್ಳುತ್ತಿತ್ತು. ಅದನ್ನು  ಮರೆಮಾಚಲು ಮರಗಳು  ಸಾಲುಗಟ್ಟಿ ಮಾಡಿದ ಪ್ರಯತ್ನಗಳೆಷ್ಟೋ, ಬಸ್ ಚಾಲಕ ಏರಿಸಿದ ವೇಗವೆಷ್ಟೋ!!  ಅದು ಮಾತ್ರ  ಕಣ್ಣಿಗೆ  ಕಾಣಿಸುತ್ತಲೇ  ಇತ್ತು. ಯಾವಾಗ ಬಸ್ ಒಮ್ಮೆಲೇ  ಎಡಕ್ಕೆ ತಿರುಗಿತೋ, ನಕ್ಷತ್ರ  ಕಣ್ಣಳತೆಯಿಂದ ಬಹಳ  ದೂರವಾದಂತೆ  ಅನಿಸಿತು.  ಸಂತೆಗೆ  ಬಂದಮೇಲೆ ಸುಮ್ಮನಿರದೆ  ಬೇರೆ  ನಕ್ಷತ್ರಗಳನ್ನು ನೋಡೋಣವೆಂದರೆ ಅದಕ್ಕೂ ಒಪ್ಪದ ಮನಸು ಅದೇ ನಕ್ಷತ್ರಕ್ಕಾಗಿ  ಕಾಯುತ್ತಿತ್ತು.  ಬೇರೆ ನಕ್ಷತ್ರಗಳಿಗೇನೂ ಕೊರತೆಯಿರಲಿಲ್ಲ, ಅದರಂತೆಯೇ ಎಷ್ಟೊಂದಿದ್ದವು, ಅದಕ್ಕಿಂತ  ಜಾಸ್ತಿ  ಪ್ರಕಾಶಿಸುವವು ಕೂಡ.   ಆದರೂ ಅದೇ ಬೇಕಿತ್ತು. ಅದರಲ್ಲಿ ಅಷ್ಟೊಂದೇನೂ ವಿಶೇಷವಿರಲಿಲ್ಲ.  ಅದರಷ್ಟಕ್ಕೆ ಅದು ಇದ್ದ ರೀತಿ, ಹೇಳದೆ ಕೇಳದೆ ಜೊತೆಗೆ ಬಂದ ರೀತಿ. . ಮನಸ್ಸಿಗೆ  ಮತ್ತೆನು ಕಾರಣಗಳು  ಬೇಕಿರಲಿಲ್ಲ. ಆ ನಕ್ಷತ್ರವೊಂದೇ ಸಾಕಿತ್ತು.  ಅದು ಮತ್ತೆ ಸಿಗುವುದೆಂದು ನಂಬಿಕೆಯಿತ್ತು . ಬಸ್ ಬಲಕ್ಕೆ ತಿರುಗಿತು. ನಕ್ಷತ್ರ ನನ್ನತ್ತ !!

No comments:

Post a Comment