Sunday, April 28, 2013

ನನ್ನ ಅವ(ನ)ಲೋಕನ

                                                                                  ಯಾರದೋ ಮೇಲಿನ ಅಸಮಾಧಾನಕ್ಕೆ ಕರೆಂಟ್ ಹೊಡೆದ ಕಾಗೆಯಂತಾಗಿ, ಕೋಪ ತಾಪಗಳ ಜೊತೆಗೆ ಬಹಳ ಬೇಸರವೆಂಬ ಬೇಗೆಯಲ್ಲಿ ನನ್ನನ್ನು ನಾನೇ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ! ಆವಾಗ ಕೋಣೆಯೊಳಗೆ ಬರುವ ಅಣ್ಣನ ಮಗು ಜೋಡಿಸಿಟ್ಟ ಪುಸ್ತಕಗಳನ್ನೆಲ್ಲ ಚೆಲ್ಲಾಪಿಲ್ಲಿಯಾಗಿ ಬಿಸಾಡಲು, ಆ ಮಗುವಿನ ಮೇಲೂ ಕೂಗಾಡುವಷ್ಟು ಕ್ರೂರಿಯಾಗಿರುತ್ತದೆ ಈ ಮನಸ್ಸು. ಎಷ್ಟೇ ಕಿರುಚಿದರೂ ಅರ್ಥಮಾಡಿಕೊಳ್ಳದ ಮಗುವಿನ ಮುಂದೆ ಸೋತು ಸುಣ್ಣವಾಗಿ..ಸಣ್ಣ ದನಿಯಿಂದ "ನಿಂಗ್ಯಾಕೆ ಎಷ್ಟ್ ಹೇಳಿದ್ರು ಅರ್ಥಾನೆ ಆಗಲ್ಲ" ಎಂದು ಕೇಳಿದಾಗ ಮಗು ಕೊಟ್ಟ ಉತ್ತರ "ನಾನಿನ್ನೂ ಚಿಕ್ಕವನು, ಅರ್ಥ ಆಗಲ್ಲ ನಂಗೆ" ಅಂತ !! ಅಷ್ಟೇ! ನಾನೇಕೆ ಹೀಗೆ ಎಂದು ನನ್ನನ್ನು ನಾನು ಕೇಳುವ ಮೊದಲೇ ಉತ್ತರ ಸಿಕ್ಕಂತಾಗಿ ಒಂದು ಖುಷಿಯ ನಗು ಮನಸ್ಸಿನಲ್ಲಿ ಸುಮ್ಮನೆ ಸರಿದು ಹೋಯಿತು.

ಎಷ್ಟೊಂದು ಸಲ ಇನ್ನೊಬ್ಬರನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವೇ ತಪ್ಪೆಂದು ಅನಿಸಿವುದು ಇದಕ್ಕಾಗಿಯೇ. ಅವ್ನ್ ಹೇಗೆ ಎಂದು ನಂಗ್ ಗೊತ್ತು ಅಂದ್ರೆ, ನಾನು ಅವನ ಬಗ್ಗೆ ನನಗನಿಸಿದ ಹಾಗೆ ತಿಳಿದುಕೊಂಡಿರುವುದೇ ಹೊರತು ಅವನ ಪರಿಪೂರ್ಣ ಪರಿಚಯವಾಗಿದೆ ಎಂದಲ್ಲ. ಅದಕ್ಕೇ! ಅವನು ಇಂದು ನಡೆದುಕೊಂಡಿರುವ ರೀತಿ ನನಗೆ ಬೇಜಾರು ಮತ್ತು ಕೊಪವನ್ನುಂಟು ಮಾಡಿರುವುದು! ತಪ್ಪು ಆಗಿರುವುದು ಅವನಿಂದಲ್ಲ, ಅರ್ಥಮಾಡಿಕೊಳ್ಳುವಲ್ಲಿ ಸೋತಿದ್ದೇನೆ ಎಂದು ನನಗೆ ಅರಿವಾಗಿದ್ದರಿಂದ! ಅವನು ಹೀಗೇ ಮಾಡಬೇಕೆಂದು ನನ್ನ ಮನಸ್ಸು ಬಯಸುವುದರಿಂದಾಗಿ, ಅವನಲ್ಲಿ ಆಗುವ ಚಿಕ್ಕ ಬದಲಾವಣೆಯೂ ಸಹಿಸಲಾಗದ ದೊಡ್ಡ ಅಪರಾಧವೆಂಬಂತೆ ಅನಿಸುತ್ತದೆ.

                                                                        ಅಷ್ಟಕ್ಕೂ ಬದಲಾವಣೆ ನಿಶ್ಚಲ, ಬದಲಾಗದಿರುವುದು ಕೆಲವು ನಿರ್ಜೀವಿ ಮಾತ್ರ. ಅವನ ಆ ಬದಲಾವಣೆ ನನಗೆ ಅವನನ್ನು ದ್ವೇಷಿಸುವಷ್ಟು ಅಸಮಾಧಾನ ಉಂಟು ಮಾಡುತ್ತದೆ ಎಂದಾದರೆ ನಾನು ಇಷ್ಟಪಡುತ್ತಿದ್ದದ್ದು ಅವನನ್ನೋ ಅಥವಾ ಅವನ ನಿರ್ದಿಷ್ಟ ನಡತೆಯನ್ನೋ!! ನಾನೇಕೆ ಆ ಕ್ಷಣಕ್ಕೆ ತಕ್ಕ ಹಾಗೆ ಪ್ರತಿಕ್ರಿಯಸದೆ ಯಾವಾಗಲೂ ಪೂರ್ವಾಗ್ರಹ ಮತ್ತು ಭವಿಷ್ಯತ್ತಿನ ಸರಾಸರಿ ತೆಗೆದು ಯೋಚಿಸಿ ವರ್ತಮಾನವನ್ನು ಅವಮಾನಿಸುತ್ತೇನೆ? ಹಠಾತ್ತಾಗಿ ಬರುವ ಅನಿರೀಕ್ಷಿತಕ್ಕೆ ನನ್ನ ಮನಸ್ಸು ಹೇಗೆ ಪ್ರತಿಕ್ರಿಯಿಸಬಹುದು ಎಂಬುದೇ ನನಗೆ ಅಸ್ಪಷ್ಟ, ಅಂದರೆ ನನಗೆ ನಾನೇ ಅರ್ಥವಾಗಿಲ್ಲ. ಇನ್ನು ಬೇರೆಯವರನ್ನು ಅರ್ಥಮಾಡಿಕೊಳ್ಳಬೇಕೆಂಬ ಹುಂಬ ಪ್ರಯತ್ನವೇಕೆ ! ! ೧೧:೧೦ ಎಂಬ ಸಮಯ ಮುಂದಿನ ನಿಮಿಷವೇ ಸುಳ್ಳು! ನಿನ್ನೆ ಕಣ್ಮನ ಸೆಳೆಯುತ್ತಿದ್ದ ಹೂವು ಇಂದಿಲ್ಲ.. ಇಂದು ಮಾಡಿದ ಅನ್ನ ನಾಳೆ ತಂಗಳು. ಸತ್ಯ ತಾತ್ಕಾಲಿಕ, ಕೆಲವು ಸತ್ಯ ಕ್ಷಣಿಕವಾದರೆ ಕೆಲವು ವಾರ್ಷಿಕ! ಆದ್ದರಿಂದಲೇ ಸುಳ್ಳು ಎನ್ನುವುದು ಪ್ರಚಲಿತ ಮತ್ತು ಸುಲಲಿತ.

                                ಸರಿಪಡಿಸಿಕೊಳ್ಳಲು ನನ್ನಲ್ಲೇ ಸಾಕಷ್ಟು ವಿಷಯಗಳಿರುವಾಗ ಮತ್ತೊಬ್ಬರ ಬದುಕನ್ನು ಅವರ ನೀತಿಯ ರೀತಿಯನ್ನು ಊಹಿಸಿ ನಿರ್ಧರಿಸುವ ವ್ಯರ್ಥ ಪ್ರಯತ್ನವೇಕೆ? ಇದು ಸಂತೋಷಹೀನನಾಗಲು ಇರುವ ಇನ್ನೊಂದು ಮಾರ್ಗವೆಂದು ಗೊತ್ತಿದ್ದೂ ಇಲ್ಲೇ ಕಾಲಿಡುವುದೇಕೆ? ಅವನು ಅವನಿಷ್ಟ ಬಂದ ಹಾಗೆ ಇದ್ದರೆ ಅವನನ್ನು ಸ್ವಾರ್ಥಿ ಎಂದು ಕರೆಯಲು ನಾನ್ಯಾರು? ಅಷ್ಟಕ್ಕೂ ನಿಸ್ವಾರ್ಥಿಯ ಅಸ್ತಿತ್ವ ಇರುವುದು ಎಲ್ಲಿ? ಪ್ರತಿಯೊಂದು ತಾಯಿ ಕೂಡ ಮಕ್ಕಳ ವಿಷಯ ಬಂದಾಗ ಬೇರೆಯವರ ದೃಷ್ಟಿಯಲ್ಲಿ ಸ್ವಾರ್ಥಿಯೇ! ಸ್ನೇಹವೂ ಸ್ವಾರ್ಥವೇ! ತನ್ನ ಸ್ನೇಹಿತನ ಸಂತೋಷವೇ ತನ್ನ ಸಂತೋಷ ಎನ್ನುವವನದೂ ಸ್ವಾರ್ಥವೇ ಅಲ್ಲವೇ? ಅವನು ಖುಷಿಯಾಗಿರಲು ಸ್ನೇಹಿತ ಖುಷಿಯಾಗಿರಬೇಕಷ್ಟೇ. ಅಂದಮಾತ್ರಕ್ಕೆ ಇನ್ನೊಬ್ಬರ ಸಂತೋಷ ಬಯಸದೆ ಇರುವವರೆಲ್ಲ ಸ್ವಾರ್ಥಿಗಳೇ? ಅವರವರ ಸಂತೋಷ ಮತ್ತು ದುಖ್ಖಕ್ಕೆ ಅವರವರೇ ಹೊಣೆಯಲ್ಲವೇ? ನನ್ನ ಆನಂದ ಅವನ ಮೇಲೆ ಅವಲಂಬಿತ ಎಂದಾದರೆ ಇದು ಬದುಕಿನ ಒಂದು ದುರಂತಗಳಲ್ಲೊಂದಲ್ಲವೇ!

ಯಾರೋ ಪುಣ್ಯಾತ್ಮ ಹೇಳಿದಂತೆ ಒಂದು ನಿಮಿಷದ ಬೇಸರಕ್ಕಾಗಿ ೬೦ ಕ್ಷಣಗಳ ಖುಷಿಯನ್ನು ಬಲಿಕೊಡುವುದು ನಿಜಕ್ಕೂ ಶೋಚನೀಯ. ಸಂಬಂಧ ಸಂಬಂಧಿಸಿದವರಿಗೆ ಮಾತ್ರ ಎನ್ನುವ ವಿಷಯ ಮರೆತು ನಾನೇಕೆ ಅವರ ಬಗ್ಗೆ ಯೋಚಿಸುವುದಲ್ಲದೇ ಅವರ ಬಗ್ಗೆ ಒಂದು ತೀರ್ಮಾನಕ್ಕೇ ಬಂದುಬಿಡುತ್ತೇನೆ? ಇನ್ನಾದರೂ ಬದುಕನ್ನು ಬಂದಂತೆ ಸ್ವೀಕರಿಸಬೇಕು, ಅವನು ಹೀಗೇ ಎಂದು ನಿರ್ಧರಿಸುವುದನ್ನು ಬಿಡಬೇಕು, ಬೇಸರಗೊಳ್ಳಲು ಕಾರಣ ಹುಡುಕುವುದನ್ನು ನಿಲ್ಲಿಸಬೇಕು, ಕೆಲಸ ಇಲ್ಲದೆ ಸುಮ್ಮನಿರೋ ಸಮಯವನ್ನು ಯಾವುದಾದರೂ ಹವ್ಯಾಸಕ್ಕಾದರೂ ದಾನ ಮಾಡಬೇಕು, ಸಂಬಂಧ ಎನ್ನುವುದು ಬಂಧನ ಅನಿಸುವ ಮೊದಲೇ ಬಿಡುಗಡೆ ಹೊಂದಬೇಕು, ಅಷ್ಟಕ್ಕೂ ನನ್ನ ಬಗ್ಗೆ ನಾನು ಯೋಚಿಸದೆ ಅವ್ನಾ ಯೋಚಿಸ್ತಾನೆ? ?