ಅಂದು ದೀಪಾವಳಿಯ ಸಂಜೆ ಸಮಯ 7.34 ಆಗುವ ಮೊದಲೇ ಅವನು ಕೆನ್ನೆಯ ಮೇಲೆ ಕೈ ಇಟ್ಟು ಕುಳಿತಿದ್ದ. ಅವನಿಗೆ ಪಟಾಕಿ ಮಾಡುತ್ತಿರುವುದೆಲ್ಲ ಶಬ್ದವೇ ಅಲ್ಲ ಅನಿಸುತ್ತಿತ್ತು. ಅದರಿಂದ ಉಂಟಾಗುವ ಬೆಳಕೂ ಒಂದು ದೊಡ್ಡ ಸುಳ್ಳಿನಂತೆ ಗೋಚರಿಸುತ್ತಿತ್ತು, ಆ ಬೆಳಕಿನ ಹಿಂದಿರುವ ಕತ್ತಲು ಮನಸ್ಸಿಗೆ ಹತ್ತಿರವೆನಿಸಿ ಅದೇ ಪರಮ ಸತ್ಯದಂತೆ ಕಾಣುತ್ತಿತ್ತು,ಏಕೆಂದರೆ ಅವನು ಸತ್ಯವನ್ನು ತುಂಬಾ ಪ್ರೀತಿಸುತ್ತಿದ್ದ,ಸುಳ್ಳಿಗೂ ಹೊಟ್ಟೆ ಕಿಚ್ಚಾಗುವಷ್ಟು!! ಅಂತಹ ಕತ್ತಲನ್ನೂ ಕ್ಷಣಕಾಲ ಸುಳ್ಳಾಗಿಸಲು ಪ್ರಯತ್ನಿಸುತ್ತಿರುವ ಪಟಾಕಿಯ ಮೇಲೆ ತಾತ್ಕಾಲಿಕ ಕನಿಕರ ಉಂಟಾಗುತ್ತಿತ್ತು...
ಅವನು ಎಂದಿನಂತೆ 90A ನಂಬರಿನ ಖಾಲಿ ಬಸ್ ನಲ್ಲಿ ಕುಳಿತು ತೂಕಡಿಸುತ್ತಿದ್ದ, ತುಂಬ ಹೊತ್ತು ಬಸ್ ಚಲಿಸದೆ ನಿಶ್ಚಲ ಸ್ತಿತಿಯಲ್ಲಿ ಇರುವುದರಿಂದ ಸೆಕೆ ಎಂದೆನಿಸಿ ನಿದ್ರಾಭಂಗಗೊಂಡು ತಲೆ ಎತ್ತಿ ಒಮ್ಮೆ ಕಿಟಕಿಯಿಂದ ಹೊರನೋಡಿದ, ಮತ್ತದೇ ಟ್ರಾಫಿಕ್ ಎಂದು ಮನದಲ್ಲೇ ಗೊಣಗಿ ಪಕ್ಕದಲ್ಲೇ ನಿಂತಿದ್ದ ಬಸ್ ಕಡೆಗೆ ನೋಡಲು, ಅಪರಿಚಿತವಾದರೂ ಪರಿಚಯವಾಗಲೆಬೇಕೆಂದೆನಿಸುವ ಒಂದು ಮುಖ ತನ್ನನ್ನೇ ನೋಡುತ್ತಿರುವುದು ಸ್ಪಷ್ಟವಾಯಿತು, ಅವಳು ನಿಂತಲ್ಲಿಂದಲೇ ಕಣ್ಣಿನ ಮೂಲಕ ಕೊಲೆ ಮಾಡಲು ತಯಾರಾಗಿರುವಂತೆ ನೋಡುತ್ತಿದ್ದಳು, ಇವನೋ, ಜೀವನದಲ್ಲಿ ಮೊದಲ ಬಾರಿಗೆ 1 ಸುಂದರ ಹುಡುಗಿ ತನ್ನನ್ನು ಈ ರೀತಿ ನೋಡುತ್ತಿರುವುದನ್ನು ಕಂಡು ಆತ್ಮಹತ್ಯೆಗೆ ಸನ್ನದ್ಧನಾಗಿದ್ದ. ಒಟ್ಟಿನಲ್ಲಿ ಅಲ್ಲೊಂದು ಸಾವಿಗೆ ಮುನ್ನುಡಿ ಬರೆದಾಗಿತ್ತು!! ಬಸ್ ಚಲಿಸಲಾರಂಭಿಸಿತ್ತು , ಅವಳಿರುವ ಬಸ್ ಬಲಕ್ಕೆ ತಿರುಗಿ ಹೋದರೆ ಇವನ ಬಸ್ ನೇರವಾಗಿ ಮುಂದೆ ಸಾಗಿತು, ಅವನಿಗೆ ಸಂಪೂರ್ಣವಾಗಿ ಎಚ್ಚರವಾಗುವ ಮೊದಲೇ ಘಟಿಸಿದ್ದ ಘಟನೆಗೆ ಮನಸ್ಸು ತಲ್ಲಣಗೊಂಡಿತ್ತು, ಇದು ಪ್ರೀತಿ ಎಂದೆನಿಸುವುದಾದರೆ 5 ತಿಂಗಳ ಹಿಂದಷ್ಟೇ ಹೇಳಿದರೂ ಕೇಳದೆ ಬಿಟ್ಟು ಹೋದ ಅವಳ ಜೊತೆ ಇದ್ದಿದ್ದು?? ಪ್ರೀತಿಗೂ ಪುನರ್ಜನ್ಮ ಇರಬಹದು ಎಂದುಕೊಂಡು ಸುಮ್ಮನಾದ..
ಮತ್ತೆ ಹೊಸದಾಗಿ ಪ್ರೀತಿ ಶುರುಮಾಡಲು ಮನಸ್ಸು ಹಿಂದೇಟು ಹಾಕುತ್ತಿತ್ತು, ಆದರೂ ಅವಳ ಆ ನೋಟ ಕಣ್ಣಿನ ಕ್ಯಾಮರಾದಲ್ಲಿ ಸೆರೆಯಾಗಿ ಹೃದಯದಲ್ಲಿ ಮುದ್ರಣಗೊಳ್ಳಲು ತುದಿಗಾಲಲ್ಲಿ ನಿಂತಂತಿತ್ತು!! ಇದರ ಕುರಿತು ಮತ್ತೆ ಯೋಚಿಸಬಾರದೆಂದು ನಿರ್ಧರಿಸಿದ. ಸಾವು ಮೊದಲೇ ನಿರ್ಧಾರವಾದಾಗ ತಡೆಯಲು ಯಾರಿಂದಲೂ ಸಾಧ್ಯವಿಲ್ಲವೆಂಬಂತೆ ಅದೇ ಮುಖ ಅವನು ಕೆಲಸ ಮಾಡುವ ಜಾಗದಲ್ಲಿ ಮರುದಿನವೇ ಕಂಡಿತು! ಕಾಕತಾಳೀಯಕ್ಕೊಂದು ಉದಾಹರಣೆ ಎಂಬಂತೆ ಅವಳೂ ಸಹ ಅಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ಇಬ್ಬರೂ ಪ್ರತಿದಿನ ಲೆಕ್ಕವಿಲ್ಲದಷ್ಟು ಸಲ ಪರಸ್ಪರ ದೃಷ್ಟಿಯುದ್ಧ ಮಾಡಿಕೊಂಡರೂ ಮಾತಿಗೆ ಮುಂದಾಗಲಿಲ್ಲ, ಅವನಿಗೆ ಎಂದೂ ಅವಳನ್ನು ಮಾತನಾಡಿಸಬೇಕು,ಅವಳ ಬಗ್ಗೆ ತಿಳಿದುಕೊಳ್ಳಬೇಕು ಎಂದೆಲ್ಲ ಅನಿಸಲೇ ಇಲ್ಲ, ಮೌನ ಸಂಭಾಷಣೆ ಮನಸ್ಸಿಗೆ ಇನ್ನಿಲ್ಲದ ಖುಷಿ ಕೊಡುತ್ತಿತ್ತು, ಅವಳು ಎಂದೂ ಅವನನ್ನು ನೋಡಿ ನಕ್ಕಿದ್ದಿಲ್ಲ,ಅವಳಿಗೆ ತನ್ನ ಮೇಲೆ ಪ್ರೀತಿ ಇದೆಯೋ ಇಲ್ಲವೋ ಎಂಬುದೂ ಅವನಿಗೆ ಅನವಶ್ಯಕ ಸಂಗತಿಯಾಗಿತ್ತು. ಸುಮಾರು 4 ತಿಂಗಳವರೆಗೂ ಮನಸಲ್ಲೇ ಮೌನವಾಗಿ ಪ್ರೀತಿಸುತ್ತಿದ್ದ ಅವನೆದುರು 1 ದಿನ ಬೆಳಿಗ್ಗೆ ಅವಳು ಬಂದು ನಿಂತಳು, ಅವನಿಗೆ ಇಷ್ಟು ದಿನದ ಮೌನದ ಧ್ಯಾನ ಕೊನೆಗೊಳ್ಳುವ ಎಲ್ಲ ಸೂಚನೆಯೂ ಕಂಡು ಬಂತು,ಅವಳನ್ನು ಅಷ್ಟು ಹತ್ತಿರದಿಂದ ನೋಡಿದ್ದೂ ಅಂದೇ!! ಇದೇ ತಿಂಗಳ 28ಕ್ಕೆ ನನ್ನ ಮದುವೆ ದಯವಿಟ್ಟು ಬನ್ನಿ ಎಂದು ಮರಣೋತ್ತರ ದಾಖಲೆಯಂತಿದ್ದ ಆಮಂತ್ರಣ ಪತ್ರಿಕೆಯನ್ನು ಕೈಗಿತ್ತಳು!! ಅವನಿಗೆ ಮೌನ ಮುರಿಯುವ ಅವಕಾಶವೇ ಕೊನೆಗೊಂಡಿತು, ಸುಮ್ಮನೆ ನಕ್ಕು ಸರಿ ಎಂಬಂತೆ ತಲೆ ಆಡಿಸಿದ.ಸುಮಾರು ಆ ತಿಂಗಳ ಕೊನೆಯವರೆಗೂ ನಗುತ್ತಲೇ ಇದ್ದ, ಒಂಟಿಯಾಗಿ!! ಅವನ ಪಾಲಿಗೆ ನಗುವೂ ಅರ್ಥ ಕಳೆದುಕೊಂಡಿತ್ತು,ಎಲ್ಲವೂ ಸುಳ್ಳು ಎಂದೆನಿಸತೊಡಗಿತ್ತು..
ಹೀಗೆ ಸುಳ್ಳು ಮತ್ತು ಸತ್ಯದ ಸಂಶೋಧನೆಯಲ್ಲಿ ಸಮಾಧಾನ ಸಿಗದೇ ಹೊರಗಡೆ ಪಟಾಕಿಯ ಆರ್ಭಟವನ್ನು ನಿರ್ಲಿಪ್ತವಾಗಿ ನೋಡುತ್ತಿದ್ದ ಅವನಿಗೆ ತರಕಾರಿ ತರಲು ಅಮ್ಮ ಹೇಳಿದ್ದು ನೆನಪಾಗಿ ಹೊರಟು ನಿಂತ. ಹೀಗೆ ಹೋಗುತ್ತಿರುವಾಗ ದಾರಿಯಲ್ಲಿ ಏನೋ ಒಂದು ಮುಖ ಕಂಡಂತಾಗಿ ಸ್ವಲ್ಪ ಮುಂದಕ್ಕೆ ಹೋಗಿ ಏನೋ ಕಳೆದುಕೊಂಡವರಂತೆ ನಿಂತುಬಿಟ್ಟ!! ಅದೇ ಪಟಾಕಿಯ ಬೆಳಕಿನಲ್ಲಿ ಕಂಡ ಆ ಮುಖ ಮನಸ್ಸು ಬಯಸಿದ್ದ ನಿಜವಾದ ಸತ್ಯದಂತಿತ್ತು. ಆ ಕಣ್ಣಿನಲ್ಲಿರುವ ತೇಜಸ್ಸು ಕತ್ತಲೆಯನ್ನೂ ಮರೆಸುವಂತಿತ್ತು, ಅವನಿಗೆ ಮತ್ತೊಮ್ಮೆ ಒಲವಿನ ಅನುಭವ ಆರಂಭವಾದಂತಿತ್ತು. ಕನಿಕರ ಪಡುವ ಸರದಿ ಈಗ ಪಟಾಕಿಯದ್ದಾಗಿತ್ತು!!